ಕೊಪ್ಪಳ: ಉತ್ತಮ ಜೀವನಕ್ಕೆ ಆರೋಗ್ಯ ಮುಖ್ಯ. ಯುವಕರು ದುಶ್ಚಟಕ್ಕೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳದಿರಿ ಎಂದು ಮಾನಸಿಕ ಆರೋಗ್ಯ ತಜ್ಞೆ ಡಾ.ಲಕ್ಷಿ$್ಮದೇವಿ ಸಲಹೆ ನೀಡಿದರು.
ಜಿಲ್ಲಾಡಳಿತ, ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಅಕ್ರಮ ಸಾಗಣೆ ವಿರೋಧಿ ದಿನಾಚರಣೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುವಕರು ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಗಾಂಜಾ, ಅಫೀಮು, ಮದ್ಯ, ಡ್ರಗ್ಸ್ ಸೇವನೆ ಹೆಚ್ಚುತ್ತಿದೆ. ದೇಶವನ್ನು ನಶಮುಕ್ತಗೊಳಿಸಬೇಕು. ಮಾದಕ ವಸ್ತು ಸೇವನೆ ಆರೋಗ್ಯಕ್ಕೆ ಹಾನಿಕಾರಕ. ಅನೇಕ ರೋಗಗಳು ಬರುತ್ತವೆ. ಚಿಕ್ಕ ವಯಸ್ಸಿಗೆ ಸಾವು ಸಂಭವಿಸುವ ಸಾಧ್ಯತೆ ಅಧಿಕ ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ.ಮಾತನಾಡಿ, ಮಾದಕ ವಸ್ತು ಸೇವನೆ ವ್ಯಸನಕ್ಕೆ ತುತ್ತಾದವರು ಸೂಕ್ತ ಚಿಕಿತ್ಸೆ ಮೂಲಕ ಅದರಿಂದ ಹೊರ ಬರಬಹುದು. ಆಪ್ತಸಮಾಲೋಚನೆ ದೊರೆಯಲಿದೆ. ಮಾನಸಿಕ ಆರೋಗ್ಯ ಸ್ಥಿರವಾಗಿದ್ದಲ್ಲಿ ಉತ್ತಮ ಜೀವನ ನಡೆಸಬಹುದು ಎಂದು ತಿಳಿಸಿದರು.
ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಮಹೇಶ ಉಮಚಗಿ ಕ್ಷಯ ರೋಗ ಬಗ್ಗೆ ವಿವರಿಸಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ, ಮನಶಾಸ್ತ್ರಜ್ಞೆ ಪುಷ್ಪಾ ತೆರೆಸಾ, ಕಾಲೇಜು ಆಡಳಿತಾಧಿಕಾರಿ ರತ್ ವಸ್ತ್ರದ, ಪ್ರಾಚಾರ್ಯ ಆನಂದ ಹಳ್ಳಿಗುಡಿ, ಸಿಬ್ಬಂದಿ ಉದಯ, ಪರಶುರಾಮ, ಶ್ರೀನಿವಾಸ ಇತರರಿದ್ದರು.