ಅನಧಿಕೃತ ಗರ್ಭಪಾತ ಮಾಡಿದರೆ ಪರವಾನಗಿ ರದ್ದು

Published on

ಕೊಪ್ಪಳ: ಅನಧಿಕೃತವಾಗಿ ಗರ್ಭಪಾತ ನಡೆಸುವ ಆಸ್ಪತ್ರೆಗಳು ಕಂಡುಬಂದಲ್ಲಿ ಪರವಾನಗಿ ರದ್ದುಪಡಿಸಲಾಗುವುದೆಂದು ಡಿಎಚ್​ಒ ಡಾ.ಟಿ.ಲಿಂಗರಾಜು ತಿಳಿಸಿದರು.

ನಗರದ ತಮ್ಮ ಕಚೇರಿಯಲ್ಲಿ ಬುಧವಾರ ಪಿ.ಸಿ ಮತ್ತು ಪಿ.ಎನ್​.ಡಿ.ಟಿ ಕಾಯ್ದೆ ಮತ್ತು ಎಂ.ಟಿ.ಪಿ ಕಾಯ್ದೆಯ ಅಡಿ ಬರುವ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆ ಉದ್ದೇಶಿಸಿ ಮಾತನಾಡಿದರು.

ಕಾನೂನು ಪ್ರಕಾರ ಭ್ರೂಣ ಲಿಂಗ ಪತ್ತೆ ಮತ್ತು ಆಯ್ಕೆಗೆ ಅವಕಾಶವಿಲ್ಲ. ಕಾನೂನು ಬಾಹಿರವಾಗಿ ಯಾರಾದರೂ ಪತ್ತೆ ಮಾಡಿದಲ್ಲಿ ಕಠಿಣ ಕ್ರಮ ಎದುರಿಸಬೇಕಾಗಲಿದೆ. ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಕಾನೂನು ಬಾಹಿರ ಮತ್ತು ಶಿಕ್ಷಾರ್ಹ ಅಪರಾಧ. ಸರ್ಕಾರಿ ಅಥವಾ ಖಾಸಗಿ ವೈದ್ಯರು ಇಂತಹ ಕೃತ್ಯಗಳಲ್ಲಿ ಭಾಗಿಯಾದಲ್ಲಿ ಅವರ ವಿರುದ್ಧ ಕಠಿಣ ಕ್ರಮಕ್ಕೂ ಅವಕಾಶವಿದೆ. ಮೇಲ್ವಿಚಾರಣ ಸಮಿತಿ ಸ್ಕಾನಿಂಗ್​ ಸೆಂಟರ್​ಗಳಿಗೆ ತೆರಳಿ ಪರಿಶೀಲಿಸಿ ವರದಿ ನೀಡಲಿದೆ ಎಂದರು.

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರವೀಂದ್ರನಾಥ್​ ಎಂ.ಎಚ್​. ಮಾತನಾಡಿ, ಎಲ್ಲ ಸ್ಕ್ಯಾನಿಂಗ್​ ಸೆಂಟರ್​ಗಳು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ಅವಧಿ ಮುಗಿವ 3 ತಿಂಗಳ ಮುನ್ನ ಮರು ನವೀಕರಣಕ್ಕೆ ಅರ್ಜಿ ಸಲ್ಲಿಸಬೇಕು. ಕಾನೂನು ಪ್ರಕಾರ ನಿರ್ವಹಿಸಬೇಕು. ದಾಖಲೆ ನಿರ್ವಹಿಸಬೇಕು ಎಂದರು.

ಸಲಹಾ ಸಮಿತಿ ಅಧ್ಯಕ್ಷ ಡಾ.ಕೆ.ಎಚ್​.ತೊಗರಿ, ಸದಸ್ಯರಾದ ಡಾ.ಗಿರೀಶ, ಡಾ.ದಯಾನಂದಸ್ವಾಮಿ, ಡಾ.ಈಶ್ವರ ಸವಡಿ, ಡಾ. ಸ್ಮಿತಾ ಜೆ. ಐಲಿ, ಆರ್​.ಐ.ಎಂ ಅಧ್ಯಕ್ಷ ಡಾ. ಶ್ರೀನಿವಾಸ್​, ಡಾ.ಮಲ್ಲನಗೌಡ ಪೊಲೀಸ್​ ಪಾಟೀಲ್​, ವಕೀಲ ಶಂಕರ ಬಿಸರಳ್ಳಿ, ಡಾ.ವಿಶ್ವನಾಥ ಬಸವರಾಜ ನಾಲ್ವಾಡ, ಶಂಕ್ರಪ್ಪ ಬಿ. ಸುರಳ್​, ರೇಷ್ಮಾ, ಸಲೀಮಾ ಜಾನ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net