

ಕೊಪ್ಪಳ: ಬಿಎಸ್ಪಿಎಲ್ ಕಾರ್ಖಾನೆಗೆ ಅನುಮೋದನೆ ನೀಡದಂತೆ ಒತ್ತಾಯಿಸಿ ತಾಲೂಕಿನ ಹಾಲವರ್ತಿ ಗ್ರಾಮಸ್ಥರು ಮಂಗಳವಾರ ಗ್ರಾಪಂ ಅಧ್ಯೆ ಜಯಶ್ರೀ ಗೊರವರ್ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.
ಈಗಾಗಲೇ ನಮ್ಮ ಗ್ರಾಮದ ಸುತ್ತಮುತ್ತ ಅನೇಕ ಉಕ್ಕು, ಕಬ್ಬಿಣ, ಸ್ಪಾಂಜ್ ಉತ್ಪಾದನಾ ಘಟಕಗಳಿವೆ. ಕಪ್ಪುಧೂಳು, ಹೊಗೆಯಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಜ್ವರ, ನೆಗಡಿ, ಕೆಮ್ಮು, ಅಸ್ತಮಾ ಸೇರಿ ಇತರ ರೋಗಗಳು ಹೆಚ್ಚುತ್ತಿವೆ. ಕೃಷಿ ಬೆಳೆಗಳ ಮೇಲೂ ಪರಿಣಾಮ ಆಗುತ್ತಿದೆ. ಸರಿಯಾಗಿ ಇಳುವರಿ ಬರುತ್ತಿಲ್ಲ. ತೋಟಗಾರಿಕೆ ಬೆಳೆಗಳೂ ಸರಿಯಾಗಿ ಬೆಳೆಯುತ್ತಿಲ್ಲವೆಂದು ಆರೋಪಿಸಿದರು.
ಈಗಿರುವ ಕಾರ್ಖಾನೆಗಳು ನಿಯಮ ಗಾಳಿಗೆ ತೂರಿ ಕೆಲಸ ನಿರ್ವಹಿಸುತ್ತಿವೆ. ಇದೀಗ ಗ್ರಾಮಕ್ಕೆ ಹೊಂದಿಕೊಂಡೇ ಬಿಎಸ್ಪಿಎಲ್ ಕಾರ್ಖಾನೆ ಆರಂಭಕ್ಕೆ ಸರ್ಕಾರ ಅನುಮತಿ ನೀಡಿದೆ. ಇದರಿಂದ ಹಾಲವರ್ತಿ ಗ್ರಾಮ ಹಾಗೂ ಕೊಪ್ಪಳ ನಗರ ಸೇರಿ ಇತರ ಗ್ರಾಮಗಳ ಪರಿಸರ ಹಾಳಾಗಲಿದೆ. ಗ್ರಾಮ ಸ್ಥಳಾಂತರ ಮಾಡಬೇಕಾಗುವ ಸ್ಥಿತಿ ನಿಮಾರ್ಣವಾಗಲಿದೆ. ದಯವಿಟ್ಟು ಬಿಎಸ್ಪಿಎಲ್ ಕಾರ್ಖಾನೆ ಆರಂಭಕ್ಕೆ ಅನುಮತಿ ನೀಡಬಾರದು. ರದ್ದುಪಡಿಸಿ ಆದೇಶ ಮಾಡಬೇಕೆಂದು ಒತ್ತಾಯಿಸಿದರು.
ಗ್ರಾಮಸ್ಥರಾದ ಗವಿಸಿದ್ದಪ್ಪ ರಡ್ಡೇರ, ಮಾರ್ಕಂಡೆಯ ಹಿರೇಮಠ, ಹನುಮಪ್ಪ ಎನ್.ಕೆ., ನಾಗರಾಜ ಅಜ್ಜಿ, ಮಾರುತಿ, ಮಂಜು ಕೆಂಚನಗೌಡರ್, ದೇವಪ್ಪ ಗೊರವರ, ಬಾಳಪ್ಪ, ಸ್ವಾಮಿ ಹೊಸಮನಿ, ಗ್ರಾಪಂ ಅಧ್ಯೆ ಜಯಶ್ರೀ, ಸದಸ್ಯರು ಇದ್ದರು.