ಜನರ ಬಳಿಗೆ ಬರಲಿದೆ ಗೃಹ ಆರೋಗ್ಯ

Published on

ವಿಜಯವಾಣಿ ವಿಶೇಷ ಕೊಪ್ಪಳ

ಜನರ ಬಳಿಗೆ ಆರೋಗ್ಯ ಸೇವೆ ಕೊಂಡೊಯ್ಯಲು ಆರಂಭಿಸಿರುವ ಗೃಹ ಆರೋಗ್ಯ ಸೇವೆ ಕೊಪ್ಪಳದಲ್ಲೂ ಆರಂಭಗೊಳ್ಳಲಿದೆ. ವೈದ್ಯರು, ಆರೋಗ್ಯ ಸಿಬ್ಬಂದಿಗೆ ತರಬೇತಿ ನೀಡಲು ಇಲಾಖೆ ಮುಂದಾಗಿದ್ದು ಶ್ರೀವೇ ಮನೆ ಮನೆ ಭೇಟಿ ಜಾರಿಯಾಗಲಿದೆ.

ಸರ್ಕಾರಿ ಆಸ್ಪತರೆಗಳಲ್ಲಿ ಈಗಾಗಗಲೇ ಅನೇಕ ಸೇವೆ ದೊರೆಯುತ್ತಿವೆ. ಪ್ರಮುಖವಾಗಿ ಯುವಜನತೆ, ಅದರಲ್ಲೂ 30 ವರ್ಷ ಮೇಲ್ಪಟ್ಟವರಲ್ಲಿ ಕಾಣಿಸಿಕೊಳ್ಳುವ ಅಸಾಂಕ್ರಾಮಿಕ ರೋಗಗಳಿಗೆ ಚಿಕಿತ್ಸೆ ನೀಡುವುದು ಯೋಜನೆ ಮುಖ್ಯ ಉದ್ದೇಶ. ಕೋಲಾರದಲ್ಲಿ ಪ್ರಾಯೋಗಿಕವಾಗಿ ಮೊದಲ ಹಂತದಲ್ಲಿ ಯೋಜನೆ ಜಾರಿಗೊಳಿಸಲಾಗಿದೆ. ಸದ್ಯ ಎರಡನೇ ಹಂತದಲ್ಲಿ ಇತರ ಜಿಲ್ಲೆಗಳಿಗೆ ವಿಸ್ತರಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಜಿಲ್ಲೆಯಲ್ಲಿ 146 ಪ್ರಾಥಮಿಕ ಆರೋಗ್ಯ ಕೇಂದ್ರ 9 ಸಮುದಾಯ ಆರೋಗ್ಯ ಕೇಂದ್ರ, ನಾಲ್ಕು ಸಾರ್ವಜನಿಕ ಆಸ್ಪತ್ರೆ, ಜಿಲ್ಲಾಸ್ಪತ್ರೆ ಕಾರ್ಯನಿರ್ವಹಿಸುತ್ತಿವೆ.

ಜನರಿಗೆ ಅಸಾಂಕ್ರಮಿಕ ರೋಗಗಳ ನಿಯಮಿತ ತಪಾಸಣೆ, ನಿರ್ವಹಣೆ ಆರೋಗ್ಯ ಕಾರ್ಯಕರ್ತರಿಂದ ಮನೆ ಮನೆ ಭೇಟಿ ಮೂಲಕ ಅಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ. ರೋಗಗಳ ನಿಯಂತ್ರಣ, ಮುಂಜಾಗ್ರತ ಕ್ರಮ, ಜೀವನ ಶೈಲಿ ಬದಲಾವಣೆ, ಚಿಕಿತ್ಸಾ ವಿಧಾನ, ರೋಗದ ಆರಂಭಿಕ ಪತ್ತೆ ಮಾಡಲಾಗುತ್ತದೆ. ಈ ಮೂಲಕ ನಿರಂತರ ನಿಗಾವಹಿಸಿ ಅಕಾಲಿಕ ಮರಣ ತಪ್ಪಿಸುವುದು, ಆಗುವ ಅಡ್ಡ ಪರಿಣಾಮಗಳನ್ನು ತಡೆಯುವುದು ಸರ್ಕಾರದ ಯೋಚನೆ.

ಅಸಾಂಕ್ರಾಮಿಕ ರೋಗಗಳನ್ನು ಪತ್ತೆ ಮಾಡುವುದು ಯೋಜನೆ ಪ್ರಮುಖ ಭಾಗ. ಅದರಲ್ಲೂ ಅಧಿಕ ರಕ್ತದೊತ್ತಡ, ಬಾಯಿ, ಸ್ತನ, ಗರ್ಭಕಂಠ ಕ್ಯಾನ್ಸರ್​, ಸಕ್ಕರೆ ಕಾಯಿಲೆ, ಮಾನಸಿಕ ಅನಾರೋಗ್ಯ, ಸಮಲೋಲಿತ ಆಹಾರ, ನರ ಸಂಬಂಧಿ ರೋಗಗಳು, ನಿದ್ರೆಯಲ್ಲಿ ಉಸಿರುಗಟ್ಟುವಿಕೆ, ದೀರ್ಘಕಾಲದ ಮೂತ್ರಪಿಂಡ ಕಾಯಿಲೆ, ದೀರ್ಘಕಾಲದ ಶ್ವಾಸಕೋಶದ ಕಾಯಿಲೆ, ಲಿವರ್​ ಕಾಯಿಲೆ, ರಕ್ತಹಿನತೆ ತಪಾಸಣೆ ಮಾಡಲಾಗುತ್ತದೆ.

ಆರೋಗ್ಯ ಕಾರ್ಯಕರ್ತರು ಮನೆ ಭೇಟಿ ವೇಳೆ ಶಂಕಿತ ಪ್ರಕರಣಗಳ ಬಗ್ಗೆ ಇಲಾಖೆಗೆ ಮಾಹಿತಿ ನೀಡಲಿದ್ದಾರೆ. ಬಳಿಕ ರಕ್ತ ತಪಾಸಣೆ ಸೇರಿ ಇನ್ನಿತರ ತಪಾಸಣೆಗೆ ಆಸ್ಪತ್ರೆಗೆ ತೆರಳುವಂತೆ ಸಲಹೆ ನೀಡಲಾಗುತ್ತದೆ. ಪರೀೆಗಳಲ್ಲಿ ಕಾಯಿಲೆ ದೃಢಪಟ್ಟರೆ ಚಿಕಿತ್ಸೆ ನೀಡುವ ಜತೆಗೆ ಆಪ್ತಸಮಾಲೋಚನೆ ದೊರೆಯಲಿದೆ. ಸಮುದಾಯ, ಸಾರ್ವಜನಿಕ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ದೊರೆವ ಚಿಕಿತ್ಸೆ ನೀಡಲಾಗುತ್ತದೆ. ಅಗತ್ಯವಿದ್ದರೆ ಆಯುಷ್ಮಾನ ಭಾರತ, ಆರೋಗ್ಯ ಕರ್ನಾಟಕ ಯೋಜನೆಗಳಡಿ ಚಿಕಿತ್ಸೆ ಪಡೆಯಲು ಇಲಾಖೆ ಅನುವು ಮಾಡಿಕೊಡಲಿದೆ.

ತರಬೇತಿ ಬಳಿಕ ಸೇವೆ

ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತರು, ಸಮುದಾಯ ಆರೋಗ್ಯಾಧಿಕಾರಿಗಳು ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವೆ ಒದಗಿಸುತ್ತಿದ್ದಾರೆ. ಅವರಿಗೆಲ್ಲ ಗೃಹ ಆರೋಗ್ಯ ಯೋಜನೆಯಡಿ ದೊರೆವ ಸೇವೆಗಳ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಲಿದೆ. ಬಳಿಕ ಮನೆ ಭೇಟಿ ವಿಧಾನ, ಮಾಹಿತಿ ಸಂಗ್ರಹಿಸುವಿಕೆ, ಸೇವೆಗಳನ್ನು ತಲುಪಿಸುವ ಬಗೆ ಇನ್ನಿತರ ವಿಷಯಗಳ ಕುರಿತು ತರಬೇತಿ ನೀಡಲು ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈಗಾಗಲೇ ಗೃಹ ಆರೋಗ್ಯ ಮಾಹಿತಿ ಕೈಪಿಡಿ ಸಿದ್ಧಗೊಂಡಿದ್ದು, ಬಿಡುಗಡೆ ಮಾಡಲಾಗಿದೆ. ಆಶಾ ಕಾರ್ಯಕರ್ತೆಯರಿಗೆ ಕೈಪಿಡಿ ನೀಡಿ ಯೋಜನೆ ಮಾಹಿತಿ ನೀಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net