ಕೊಪ್ಪಳ: ಪಡಿತರ ಚೀಟಿ ತಿದ್ದುಪಡಿಗೆ ಸರ್ಕಾರ ಅವಕಾಶ ಕಲ್ಪಿಸಿದೆ. ಆಹಾರ ಇಲಾಖೆಯಿಂದ ಗ್ರಾಮ ಒನ್ ಕೇಂದ್ರಗಳಿಗೆ ಲಾಗಿನ್ ಐಡಿ ಸೃಜಿಸಿ ವಿತರಿಸಲಾಗುತ್ತಿದೆ.
ಸರ್ಕಾರ ಗೃಹ ಲಕ್ಷಿ$್ಮ ಹಾಗೂ ಅನ್ನಭಾಗ್ಯ ಯೋಜನೆಗಳನ್ನು ಪಡಿತರ ಚೀಟಿ ಆಧರಿಸಿ ಅನುಷ್ಠಾನ ಮಾಡುತ್ತಿದೆ. ಇತ್ತೀಚೆಗೆ ಅನರ್ಹರ ಪಡಿತರ ಚೀಟಿಗಳನ್ನು ರದ್ದುಪಡಿಸಿದೆ. ಈ ಬೆನ್ನಲ್ಲೇ ಪಡಿತರ ಚೀಟಿಗಳಲ್ಲಿ ತಿದ್ದುಪಡಿ, ಬದಲಾವಣೆ, ತೆಗೆದುಹಾಕುವಿಕೆ ಸೇರಿ ಇತರ ಮಾರ್ಪಾಡು ಮಾಡಲು ಡಿ.1ರಿಂದ ಅವಕಾಶ ನೀಡಿದೆ. ದುರ್ಬಳಕೆ ತಪ್ಪಿಸಲು ಆಹಾರ ಇಲಾಖೆಯಿಂದಲೇ ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳ ಮೂಲಕ ಅವಕಾಶ ಕಲ್ಪಿಸಿದೆ.
ಆದರೆ, ಜಿಲ್ಲೆಯಲ್ಲಿ ಗ್ರಾಮ ಒನ್ ಕೇಂದ್ರಗಳಿಗೆ ಲಾಗಿನ್ ಅಡಿ ನೀಡುವುದು ವಿಳಂಬವಾಗಿದೆ. ಈ ತಿಂಗಳ ಅಂತ್ಯದವರೆಗೆ ಮಾತ್ರ ತಿದ್ದುಪಡಿಗೆ ಅವಕಾಶವಿದೆ. ಆದರೆ, ದಿನಗಳು ಕಳೆದಿದ್ದು ವಿವಿಧ ಕಾರಣ ನೀಡಿದ ಅಧಿಕಾರಿಗಳು ಲಾಗಿನ್ ಐಡಿ ನೀಡಿರಲಿಲ್ಲ. ಈ ಬಗ್ಗೆ ವಿಜಯವಾಣಿ ಡಿ.18ರಂದು "ಗ್ರಾಮ ಒನ್ ಇಲ್ಲ ಲಾಗಿನ್' ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಎಚ್ಚೆತ್ತ ಜಿಲ್ಲಾಡಳಿತ ಅಧಿಕಾರಿಗಳಿಗೆ ಸೂಚಿಸಿ ಲಾಗಿನ್ ಐಡಿ ನೀಡುವಂತೆ ತಾಕೀತು ಮಾಡಿದೆ.
ಒಂದೊಂದು ತಾಲೂಕಿನ ಗ್ರಾಮ ಒನ್ ಸೇವಕರನ್ನು ಕರೆದು ಅಗತ್ಯ ದಾಖಲೆ ಪಡೆದು ಲಾಗಿನ್ ನೀಡಲಾಗುತ್ತಿದೆ. ಸದ್ಯ ಕೊಪ್ಪಳ, ಕುಷ್ಟಗಿ ತಾಲೂಕಿನವರಿಗೆ ಲಾಗಿನ್ ಐಡಿ ಸೃಜಿಸಿ ನೀಡಲಾಗುತ್ತಿದೆ. ಈವರೆಗೆ ಸುಮಾರು 78 ಐಡಿಗಳನ್ನು ನೀಡಿದ್ದು, ಗುರುವಾರ ಸರ್ವರ್ ಸಮಸ್ಯೆ ಕಾರಣ ಬಹಳ ಐಡಿ ರಚನೆ ಸಾಧ್ಯವಾಗಿಲ್ಲ. ಶುಕ್ರವಾರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಾಡಿ ನೀಡುವುದಾಗಿ ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.