

ಕೊಪ್ಪಳ: ಮಾರುಕಟ್ಟೆಯಲ್ಲಿ ಉತ್ಪನ್ನವನ್ನು ಗ್ರಾಹಕರಿಗೆ ತಲುಪಿಸುವುದು ಸವಾಲಿನ ಕೆಲಸ. ಜನರನ್ನು ತಲುಪುವ ಕಲೆ ಅರಿತಿರಬೇಕು ಎಂದು ಮರಿಯಮ್ಮನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕಿ ಡಾ.ರೂಪಾ.ಪಿ.ಸಿ.ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಹಯೋಗದಲ್ಲಿ ಶುಕ್ರವಾರ ನಡೆದ ರತನ್ ಟಾಟಾ ವ್ಯಕ್ತಿತ್ವ ಮತ್ತು ಸಾಧನೆ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಒಂದು ಸರಕನ್ನು ಗ್ರಾಹಕರಿಗೆ ತಲುಪಿಸಲು ಹಲವು ಮಾರ್ಗಗಳಿವೆ. ಕರಪತ್ರ, ಜಾಹೀರಾತು, ಸೆಲೆಬ್ರಿಟಿಗಳ ಶಿಫಾರಸು, ಬಾಯಿ ಮಾತಿನ ಪ್ರಚಾರ ಮಾಡಲಾಗುತ್ತಿದೆ. ಗುಣಮಟ್ಟ, ಜನಸಾಮಾನ್ಯರಿಗೆ ಹೊರೆಯಾಗದ, ಉದ್ಯಮಿಗೆ ನಷ್ಟವಾಗದಂತೆ ದರ ನಿಗದಿಯೂ ಮುಖ್ಯ ಅಂಶವಾಗಲಿದೆ ಎಂದರು.
ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶ ಸಂಚಾಲಕಿ ಡಾ.ಟಿ.ವಿ.ವಾರುಣಿ ಮಾತನಾಡಿ, ರತನ್ ಟಾಟಾ ಬಡತನದಲ್ಲಿ ಹುಟ್ಟಿ ಬೆಳೆದು ಅನೇಕ ಸವಾಲುಗಳನ್ನು ಎದುರಿಸಿ ಉದ್ಯಮಿಯಾಗಿ ಸಾಧನೆ ಮಾಡಿದ್ದಾರೆ. ಯಶಸ್ಸಿನ ಜತೆಗೆ ಸಮಾಜಮುಖಿ ಕಾರ್ಯಗಳನ್ನು ರೂಪಿಸಿ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಿದ ವ್ಯಕ್ತಿತ್ವ ಅವರದು ಎಂದು ಸ್ಮರಿಸಿದರು.
ಕಾಲೇಜು ಸಿಬ್ಬಂದಿ ಶಿವಮೂರ್ತಿಸ್ವಾಮಿ ಗುತ್ತೂರು, ಡಾ.ವೀರಣ್ಣ ಸಜ್ಜನರ, ಪವಿತ್ರಾ ಹೊಸೂರು, ಬಿ.ಡಿ.ಮಾಳೆಕೊಪ್ಪ, ಜ್ಞಾನೇಶ್ವರ ಪತ್ತಾರ, ಡಾ.ಗಿರಿಜಾ ತುರಮುರಿ ಇತರರಿದ್ದರು.