

ಕೊಪ್ಪಳ: ಮೇಘಾಲಯ ರಾಜ್ಯಪಾಲ ಸಿ.ಎಚ್.ವಿಜಯಶಂಕರ್ ಅವರು ಶನಿವಾರ ನಗರದ ಗವಿಮಠಕ್ಕೆ ಭೇಟಿ ನೀಡಿ ಶ್ರೀಗಳ ದರ್ಶನ ಪಡೆದರು. ಬಳಿಕ ಪದ್ಮಶ್ರೀ ಪುರಸತೆ ಮೋರನಾಳದ ಭೀಮವ್ವ ಶಿಳ್ಳಿಕ್ಯಾತರ ಮನೆಗೆ ತೆರಳಿ ತೊಗಲುಗೊಂಬೆ ಕಲೆ ವೀಸಿ ಖುಷಿಪಟ್ಟರು.
ಮೊದಲು ಗವಿಮಠದ ಗದ್ದುಗೆ ದರ್ಶನ ಪಡೆದ ರಾಜ್ಯಪಾಲರು, ಬಳಿಕ ಗವಿಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಮಠದ ಬಗ್ಗೆ ಕೇಳಿ ತಿಳಿದರು. ಮೇಘಾಲಯದಲ್ಲಿನ ಪರಿಸರ, ಆಡಳಿತದ ಬಗ್ಗೆ ವಿಷಯ ಹಂಚಿಕೊಂಡರು. ಜತೆಗೆ ಮೇಘಾಲಯದಿಂದ ತಂದಿದ್ದ ವಿಶೇಷ ಉಡುಗೊರೆ ಅರ್ಪಿಸಿದರು. ಶ್ರೀಗಳು ವಿಜಯಶಂಕರ ದಂಪತಿಯನ್ನು ಸನ್ಮಾನಿಸಿದರು. ಬಳಿಕ ಮಠದ ಪ್ರಸಾದ ನಿಲಯದಲ್ಲಿ ಪ್ರಸಾದ ಸೇವಿಸಿದರು.
ಬಳಿಕ ನಗರದ ಅರುಣ ಚೇತನ ದಿವ್ಯಾಂಗ ಮಕ್ಕಳ ಶಾಲೆಗೆ ತೆರಳಿ ಕೆಲ ಕಾಲ ಮಕ್ಕೊಂದಿಗೆ ಸಮಯ ಕಳೆದರು. ಶಾಲೆ, ಮಕ್ಕಳ ಬಗ್ಗೆ ವಿಚಾರಿಸಿದರು. ಮೋರನಾಳದ ಪದ್ಮಶ್ರೀ ಪುರಸತ ತೊಗಲುಗೊಂಬೆ ಕಲಾವಿದೆ ಭೀಮವ್ವ ಶಿಳ್ಳಿಕ್ಯಾತರ ಮನೆಗೆ ತೆರಳಿದರು. ಭೀಮವ್ವ ಅವರನ್ನು ಸನ್ಮಾನಿಸಿದರು. ಕಲೆ ಬಗ್ಗೆ ಕೇಳಿ ತಿಳಿದುಕೊಂಡರು. ತೊಗಲು ಗೊಂಬೆ ಬಳಸಿ ಕೆಲ ಆಟವನ್ನು ಭೀಮವ್ವ ಪ್ರದರ್ಶಿಸಿದ್ದು ವಿಶೇಷವಾಗಿತ್ತು. ಮೇಘಾಲಯಲಕ್ಕೆ ತೆರಳಿ ಕಲೆ ಪ್ರದರ್ಶನ ನೀಡುವಂತೆ ಆಹ್ವಾನ ನೀಡಿದರು. ಗ್ರಾಮ ಪ್ರವೇಶಕ್ಕೂ ಮುನ್ನ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಪುಷ್ಪಾರ್ಪಣೆ ಮಾಡಿ ವಂದಿಸಿದರು.
ಶಾಸಕ ರಾವೇಂದ್ರ ಹಿಟ್ನಾಳ, ವಿಪ ಸದಸ್ಯೆ ಹೇಮಲತಾ ನಾಯಕ, ಬಿಜೆಪಿ ರಾಜ್ಯಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್, ಜಿಲ್ಲಾಧ್ಯಕ್ಷ ಬಸವರಾಜ ದಢೇಸುಗೂರು, ವಿಭಾಗ ಸಹ ಪ್ರಭಾರಿ ಚಂದ್ರು ಹಲಗೇರಿ, ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ, ಮಾಜಿ ಸಂಸದ ಶಿವರಾಮೆಗೌಡ, ಪ್ರಮುಖರಾದ ಮಹಾಂತೇಶ ಪಾಟೀಲ್ ಮೈನಳ್ಳಿ, ಡಾ.ಕೆ.ಜಿ.ಕುಲಕರ್ಣಿ, ಅಪ್ಪಣ್ಣ ಪದಕಿ ಇತರರಿದ್ದರು.