

ಕೊಪ್ಪಳ: ತಾಲೂಕಿನ ಮಾದಿನೂರು ಗ್ರಾಮದಲ್ಲಿ ವಿದ್ಯುತ್ ಬಿಲ್ ಪಾವತಿಸದ ವೃದ್ಧೆ ಮನೆಯ ವಿದ್ಯುತ್ ಸಂಪರ್ಕ ಕಟ್ಟಲು ಹೋದ ಜೆಸ್ಕಾಂ ಸಿಬ್ಬಂದಿ, ಅಜ್ಜಿ ಸ್ಥಿತಿ ಕಂಡು ತಾವೇ ಬಿಲ್ ಪಾವತಿಸಿ ಮಾನವೀಯತೆ ಮೆರೆದಿದ್ದಾರೆ.
ಅಣ್ಣಮ್ಮ ಬಡಿಗೇರ ಎಂಬ ವೃದ್ಧೆ ಮಗನೊಂದಿಗೆ ತಗಡಿನ ಮನೆಯಲ್ಲಿ ವಾಸವಿದ್ದಾರೆ. ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ದೊರೆಯುತ್ತಿದೆ. ಆದರೆ, ಹಿಂದಿನ ಬಾಕಿ 5,400ರೂ. ಕಟ್ಟಿರಲಿಲ್ಲ. ಬಾಕಿ ವಸೂಲಿಗೆ ಜೆಸ್ಕಾಂ ಅಧಿಕಾರಿಗಳು ಮುಂದಾಗಿದ್ದಾರೆ. ಲೈನ್ಮ್ಯಾನ್ಗಳು ಅಜ್ಜಿ ಮನೆಗೆ ತೆರಳಿ ಬಿಲ್ ಪಾವತಿಸಲು ತಿಳಿಸಿದ್ದಾರೆ. ಇಲ್ಲದಿದ್ದರೆ ಸಂಪರ್ಕ ಕಡಿತಗೊಳಿಸುವುದಾಗಿ ಹೇಳಿದ್ದಾರೆ.
ಅಜ್ಜಿ ಮಗನ ಕೈ ಬೆರಳು ತುಂಡಾಗಿದ್ದು ದುಡಿವ ಸ್ಥಿತಿಯಲ್ಲಿಲ್ಲ. ತಾನೇ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿರುವ ಬಗ್ಗೆ ಅಳಲು ತೋಡಿಕೊಂಡಿದ್ದಾಳೆ. ತನ್ನ ಬಳಿ 400ರೂ. ಇದ್ದು, ಅದನ್ನು ತೆಗೆದುಕೊಳ್ಳಿ. ಬಾಕಿ ಹಣ ನಂತರ ಪಾವತಿಸುವೆ. ವಿದ್ಯುತ್ ಸಂಪರ್ಕ ಕಡಿತ ಮಾಡಬೇಡಿ ಎಂದು ಮನವಿ ಮಾಡಿದ್ದಾಳೆ. ವಿಷಯ ತಿಳಿದು ಮಾದಿನೂರು ಭಾಗದ ಜೆಸ್ಕಾಂ ಸಿಬ್ಬಂದಿಗಳು ತಮ್ಮಿಂದ ಆದಷ್ಟು ನೆರವು ನೀಡಿ ಅಜ್ಜಿ ಬಾಕಿ ಮೊತ್ತ ಪಾವತಿಸಿ ಮಾನವೀಯತೆ ಮೆರೆದಿದ್ದಾರೆ.