ಶಿವಶಾಂತವೀರ ಸ್ವಾಮೀಜಿ ಪುಣ್ಯಸ್ಮರಣೆ, ಭಕ್ತಗಣದೊಂದಿಗೆ ಗವಿಶ್ರೀ ಪಾದಯಾತ್ರೆ

Gavishree padayatra in koppal shivashantavera shree punya smarane
ಕೊಪ್ಪಳದಲ್ಲಿ ಲಿಂ.ಶ್ರೀ ಶಿವಶಾಂತವೀರರ ಪುಣ್ಯಸ್ಮರಣೆ ಅಂಗವಾಗಿ ಬುಧವಾರ ಅಭಿನವ ಗವಿಶ್ರೀಗಳು ಭಕ್ತರೊಂದಿಗೆ ಪಾದಯಾತ್ರೆ ನಡೆಸಿದರು. ಚಿಕೇನಕೊಪ್ಪದ ಶ್ರೀ ಚನ್ನವಿರ ಶರಣರು, ಹೂವಿನಹಡಗಲಿ ಗವಿಮಠದ ಶ್ರೀ ಹಿರಿಶಾಂತವೀರ ಸ್ವಾಮೀಜಿ, ಭಕ್ತರು ಇದ್ದರು.
Published on

ಕೊಪ್ಪಳ: ನಗರದ ಗವಿಮಠದ 17ನೇ ಪೀಠಾಧಿಪತಿ ಲಿಂ.ಶ್ರೀ ಶಿವಶಾಂತವೀರ ಸ್ವಾಮೀಜಿ ಪುಣ್ಯ ಸ್ಮರಣೆ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವು ಬುಧವಾರ ಬೆಳಗ್ಗೆ ನಗರದ ಮಳೆ ಮಲ್ಲೇಶ್ವರ ಬೆಟ್ಟದಿಂದ ಗವಿಮಠದವರೆಗೆ ಅಭಿನವ ಗವಿಶ್ರೀಗಳು ಪಾದಯಾತ್ರೆ ನಡೆಸಿದರು. ಶ್ರೀಗಳೊಂದಿಗೆ ವಿವಿಧ ಮಠಾಧೀಶರು, ರಾಜಕೀಯ ನಾಯಕರು ಮತ್ತು ಸಾವಿರಾರು ಭಕ್ತರು ಹೆಜ್ಜೆ ಹಾಕಿ ಭಕ್ತಿ ಸಮರ್ಪಿಸಿದರು.

ಮಳೆ ಮಲ್ಲೇಶ್ವರ ಬೆಟ್ಟದಲ್ಲಿ ಶಿವಶಾಂತವೀರ ಶ್ರೀಗಳ ಮೂರ್ತಿಗೆ ಅಲಂಕಾರ ಮಾಡಿ ಪೂಜೆಗೈಯುವ ಮೂಲಕ ಯಾತ್ರೆ ಆರಂಭವಾಯಿತು. ಗವಿಶ್ರೀಗಳೊಂದಿಗೆ ಚಿಕೇನಕೊಪ್ಪದ ಶ್ರೀ ಚನ್ನವಿರ ಶರಣರು, ಹೂವಿನಹಡಗಲಿ ಗವಿಮಠದ ಶ್ರೀ ಹಿರಿಶಾಂತವೀರ ಸ್ವಾಮೀಜಿ, ಶಾಲಾ&ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾವಿರಾರು ಭಕ್ತರು ಸಾಗಿದರು. ಮೆರವಣಿಗೆ ಮಾರ್ಗದುದ್ದಕ್ಕೂ ಹೂಮಳೆಗೈದರು. ದಾರಿಯುದ್ದಕ್ಕು ಶಿವಶಾಂತವೀರರ ನಾಮಸ್ಮರಣೆ ಮಾಡಿ ಭಕ್ತಿ ಸಮರ್ಪಿಸಿದರು.

ಶ್ರೀ ಶಿವಶಾಂತವೀರರ ಮೂರ್ತಿ ಮೆರವಣಿಗೆ.
ಶ್ರೀ ಶಿವಶಾಂತವೀರರ ಮೂರ್ತಿ ಮೆರವಣಿಗೆ.

ಬಿಸಿಲಿನ ತಾಪ ಹೆಚ್ಚಿದ್ದ ಕಾರಣ ಸ್ವಯಂ ಸೇವಕರು ಪಾದಯಾತ್ರಿಗಳಿಗೆ ಕುಡಿವ ನೀರು, ತಂಪು ಪಾನೀಯ, ಐಸ್​ಕ್ರೀಂ, ಚಾಕೊಲೇಟ್​, ಬಿಸ್ಕತ್​ ನೀಡಿದರು. ದಾರಿಯಲ್ಲಿ ಬಿದ್ದ ಹೂ ಸೇರಿ ಇತರ ಕಸ ಸಂಗ್ರಹಿಸಿ ಸ್ವಚ್ಛತೆ ಕಾಪಾಡಿದರು. ಮಾಜಿ ಶಾಸಕ ಬಸವರಾಜ ಹಿಟ್ನಾಳ, ಲೋಕಸಭೆ ಬಿಜೆಪಿ ಡಾ.ಬಸವರಾಜ ಕ್ಯಾವಟರ, ಕಾಂಗ್ರೆಸ್​ ಅಭ್ಯರ್ಥಿ ರಾಜಶೇಖರ ಹಿಟ್ನಾಳ, ಮುಖಂಡ ಅಮರೇಶ ಕರಡಿ ಸೇರಿ ಇತರರು ಭಾಗಿಯಾದರು. ಬೆಳಗ್ಗೆಯಿಂದಲೇ ಮಠಕ್ಕೆ ಆಗಮಿಸಿದ ಭಕ್ತರ ದಂಡು ಆಗಮಿಸಿದ್ದು, ಗದ್ದುಗೆ ದರ್ಶನ ಪಡೆದು ಪ್ರಸಾದ ಸೇವಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net