

ಕೊಪ್ಪಳ: ಪ್ರತಿ ವರ್ಷ ಮಲಿಯಮ್ಮ ದೇವಿಗೆ ಉಡಿ ತುಂಬುವ ಮೂಲಕ ಗವಿಸಿದ್ದೇಶ್ವರ ಜಾತ್ರೆಗೆ ಚಾಲನೆ ನೀಡಲಾಗುತ್ತಿತ್ತು. ಈ ಬಾರಿ 21 ವಿಶೇಷ ಚೇತನ ಮಹಿಳೆಯರಿಗೆ ಮುತ್ತೈದೆತನ ತುಂಬುವ ಮೂಲಕ ಚಾಲನೆ ನೀಡಿದ್ದು ಖುಷಿ ನೀಡಿದೆ ಎಂದು ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ನಗರದ ಗವಿಮಠದಲ್ಲಿ 21 ಜೋಡಿ ವಿಶೇಷ ಚೇತನರ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.
ಅಮೇರಿಕಾ ಜೆಸ್ಸಿಕಾ ಕಾಕ್ಸ್ ಎಂಬಾಕೆ ಹುಟ್ಟುತ್ತಲೇ ಕೈ ಇಲ್ಲದಿದ್ದರೂ ಕಾಲಿನಿಂದಲೇ ಅನೇಕ ಸಾಧನೆ ಮಾಡಿದ್ದಾಳೆ. ನಮ್ಮ ವಿಕಲತೆಗಿಂತ ಶಕ್ತಿ, ಸಾಮರ್ಥ್ಯದ ಬಗ್ಗೆ ಗಮನಿಸಬೇಕು. ದೇಹ ಮಾತ್ರ ಹೆಣ್ಣು, ಗಂಡು. ಒಳಗಿನ ಆತ್ಮ ಒಂದೇ. ನಮ್ಮೊಳಗಿನ ಚೇತನವನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕು. ನನಗೆ ನೆನಪಿರುವಂತೆ ಮಠದಲ್ಲಿ ಇದೇ ಮೊದಲ ಬಾರಿಗೆ ಮದುವೆ ನಡೆಯುತ್ತಿದೆ. ನೀವ್ಯಾರು ಬಡವರಲ್ಲ. ಅನೇಕರು ನಿಮಗಾಗಿ ನೆರವಾಗಿದ್ದಾರೆ. ಶುಭ ಲಗ್ನ ಕೂಡಿಸಿದ ಮದುವೆಯೇ ಶ್ರೇಷ್ಠ ಅಲ್ಲ. ಶ್ರೀರಾಮಚಂದ್ರನ ಮದುವೆಗೆ ವಶಿಷ್ಠ ಮುನಿಗಳು ಮುಹೂರ್ತ ನಿಗದಿಪಡಿಸಿದ್ದರು. ಆದರೂ ರಾಮ ವನವಾಸಕ್ಕೆ ತೆರಳಬೇಕಾಯಿತು.
ಅದಂತೆ ರಾಮ-ರಾವಣ, ವಿಶ್ವೇಶ್ವರಯ್ಯ&ವೀರಪ್ಪನ್ ಅವರ ರಾಶಿಗಳು ಒಂದೇ ಆದರೂ, ಅವರ ಗುಣ ಪರಸ್ಪರ ವಿರುದ್ಧ. ಗುಣ ಎಂಬುದು ಪಂಚಾಗದಲ್ಲಿ ಕಾಣಿಸದು. ಹೊಂದಾಣಿಕೆಯಿಂದ ಜೀವನ ನಡೆಸಿ. ಸಂಸಾರದಲ್ಲಿ ಹೆಚ್ಚು ಕಡಿಮೆ ಸಹಜ. ಸಣ್ಣ ಪುಟ್ಟ ತಪ್ಪು ಅಗುತ್ತದೆ. ಯಾವುದನ್ನು ತಲೆಯಲ್ಲಿ ಹಾಕಿಕೊಳ್ಳದೆ ಜೀವನ ಮಾಡಿ. ಯೋಗಿ ಆಗುವುದಕ್ಕಿಂತ ಲೋಕಕ್ಕೆ ಉಪಯೋಗಿ ಆಗಬೇಕು. ಮಠ ಅಂದರೆ ಕೇವಲ ಭಕ್ತರು, ಜಾತ್ರೆ, ದಕ್ಷಿಣೆ ಅಲ್ಲ. ಮರದಂತೆ ಮಠ ಆಗಬೇಕು. ಮರು ನೆರಳು ಅರಸಿ ಬರುವವರಿಗೆ ನೆರಳಾಗುತ್ತದೆ. ಅದರಂತೆ ಮಠವೂ ಪರಪೋಕಾರಿ ಆಗಬೇಕು. ಯಾವ ಜಾತಿ, ಮತ, ಪಂಥ ಎಂದೆಲ್ಲ ಕೇಳಬಾರದು. ಸದಾ ಒಳ್ಳೆಯ ಕೆಲಸ ಮಾಡಬೇಕು ಎಂದರು.