

ಕೊಪ್ಪಳ: ದೇಶದ ಅಭಿವೃದ್ಧಿಯಲ್ಲಿ ಕಾರ್ಖಾನೆಗಳ ಪಾತ್ರ ಇದೆ. ಅದು ಸತ್ಯ. ಹಾಗೆಂದು ಒಂದೇ ಕಡೆ ಎಲ್ಲ ಕಾರ್ಖಾನೆ ತಂದು ಹಾಕಿದರೆ ಹೇಗೆ ? ಎಲ್ಲಿ, ಎಷ್ಟು ನೀಡಬೇಕೆಂಬ ಅರಿವಿರಬೇಕು. ಕಾರ್ಖಾನೆ ಕಳಿಸಿ ಮನುಷ್ಯನನ್ನು ಉಳಿಸಬೇಕಿದೆ ಎಂದು ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಸರ್ಕಾರಕ್ಕೆ ಕಿವಿಮಾತು ಹೇಳಿದರು.
ಬಿಎಸ್ಪಿಎಲ್ ಕಾರ್ಖಾನೆ ಆರಂಭ ವಿರೋಧಿಸಿ ಸೋಮವಾರ ಕರೆ ನೀಡಿದ್ದ ಬಂದ್ ಅಂಗವಾಗಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದರು.
ವಿಷಗಾಳಿಯಿಂದ ಕಾರ್ಖಾನೆ ವ್ಯಾಪ್ತಿ ಗ್ರಾಮಸ್ಥರಲ್ಲಿ ಬಂಜೆತನ, ಅಸ್ತಮಾ, ಕ್ಷಯ, ಕ್ಯಾನ್ಸರ್ ಬರುತ್ತಿದೆ. ಮಕ್ಕಳು ಬುದ್ಧಿಮಾಂದ್ಯರಾಗುತ್ತಿದ್ದಾರೆ. ನಾಲ್ಕೆ$ದು ಜಿಲ್ಲೆಗಳಿಗೆ ಆಸರೆಯಾದ ತುಂಗಭದ್ರಾ ನದಿ ಕಲುಷಿತಗೊಂಡರೆ ಕುಡಿವ ನೀರಿಗೆ ನಾವೇನು ಮಾಡಬೇಕು ? ಭಕ್ತರು ಕೊಟ್ಟ ದಾನದಿಂದಲೇ ಮಠದಲ್ಲಿ ಅದ್ದೂರಿ ಜಾತ್ರೆ, ದಾಸೋಹ ನಡೆಯುತ್ತದೆ. ಅವರ ಕಣ್ಣೀರು ಕಂಡು ಎಲ್ಲ ಸಂಕೋಲೆ ತೊರೆದು ಹೋರಾಟಕ್ಕೆ ಬರುವಂತೆ ಮಾಡಿದೆ. ಮುಂದೇನಾಗುವುದೆಂದು ನನಗೆ ಬೇಡ. ಗವಿಸಿದ್ದಪ್ಪಜ್ಜನ ಮಕ್ಕಳ ಕಷ್ಟಕ್ಕೆ ನಾನು ಸ್ಪಂದಿಸಲಿಲ್ಲ ಎಂಬ ಮಾತು ಬೇಡ. ಎಲ್ಲರ ನೇತೃತ್ವದಲ್ಲಿ ಹೋರಾಟ ನಡೆಯಲಿ ಎಂದು ಭಾವುಕರಾದರು.
ಕಾರ್ಖಾನೆಯವರಿಂದ ದುಡ್ಡು ಹೊಡೆಯುವರೆಲ್ಲ ನಾನು ಕಾರ್ಖಾನೆಗಳ ವಿರುದ್ಧ ಸೆಡ್ಡು ಹೊಡೆದೆ. ಸರ್ಕಾರದ ವಿರುದ್ಧ ಗುಡುಗಿದೆ ಎಂದೆಲ್ಲ ಸುದ್ದಿ ಹಬ್ಬಿಸಿದ್ದಾರೆ. ನಾನು ಯಾರಿಗೂ ಗುಡುಗು ಹಾಕುವುದಿಲ್ಲ. ನನಗೇ ಅನೇಕರು ಹಾಕಿದ್ದಾರೆ. ಅವರು ಅಡಗುತ್ತಾರೆಂದು ನನಗೆ ಅರಿವಿದೆ. ನಾನು ಗವಿಸಿದ್ಧೇಶ್ವರನನ್ನು ಪ್ರೀತಿಸಿದಷ್ಟು, ಭಕ್ತರನ್ನು ಪ್ರೀತಿಸುವೆ. ನಿಮ್ಮ ಸೇವೆ ಮಾಡುವುದು ನನಗೆ ಖುಷಿ ಕೊಡುತ್ತದೆ. ಕೊಪ್ಪಳ ಸಾಂಸತಿಕ ನಗರ. ರನ್ನ ಗಂಗಾಜಲ, ಬಿಳಿ ಅರಳಿ, ಕೊಪಣಾಚಲ ಶ್ರೇಷ್ಠವೆಂದು ಹೊಗಳಿದ್ದಾನೆ. ಇದು ಹಾಳಾಗಬಾರದೆಂದು ತಮ್ಮ ಹೋರಾಟ ಟೀಕಿಸಿದವರಿಗೆ ಮಾತಿನಲ್ಲೇ ತಿವಿದರು.
ಸಂಸದ ರಾಜಶೇಖರ ಹಿಟ್ನಾಳ, ಶಾಸಕ ಗಾಲಿ ಜನಾರ್ದನ ರೆಡ್ಡಿ, ವಿಪಕ್ಷ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್, ವಿಪ ಸದಸ್ಯರಾದ ಶರಣೇಗೌಡ ಬಯ್ಯಾಪುರ, ಬಸನಗೌಡ ಬಾದರ್ಲಿ, ಮಾಜಿ ಸಚಿವ ಹಾಲಪ್ಪ ಆಚಾರ್, ಮಾಜಿ ಸಂಸದರಾದ ಕೆ.ವಿರುಪಾಕ್ಷಪ್ಪ ಸಂಗಣ್ಣ ಕರಡಿ, ಗವಿಸಿದ್ದಪ್ಪ ಕಂದಾರಿ ಮಾತನಾಡಿದರು. ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಸಂಸದ ಶಿವರಾಮೆಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್, ಸುರೇಶ ಭೂಮರಡ್ಡಿ, ಡಾ.ಬಸವರಾಜ ಕ್ಯಾವಟರ್, ವಿವಿಧ ಮಠಾಧೀಶರು, ಮುಸ್ಲಿಂ, ಕ್ರೈಸ್ತ ಧರ್ಮಗುರುಗಳು, ಮಹಿಳಾ ಸಂಘಟನೆಗಳು, ವಿವಿಧ ಹೋರಾಟ ಸಂಘಗಳ ಪ್ರತಿನಿಧಿಗಳು ಇದ್ದರು.