

ಕೊಪ್ಪಳ: ಗವಿಸಿದ್ದೇಶ್ವರ ಜಾತ್ರೋತ್ಸವ ಅಂಗವಾಗಿ ಗವಿಮಠ ಶೃಂಗಾರಗೊಳ್ಳುತ್ತಿದೆ. ಒಳಾಂಗಣದಲ್ಲಿ ಕಲ್ಲು ಹಾಗೂ ಹಸಿರು ನೆಲಹಾಸು ಹಾಕಿದ್ದು ಭಕ್ತರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿದೆ.
ಕಳೆದ ವರ್ಷದಿಂದಲೇ ಸೌಂದರ್ಯಿಕರಣ ಕೆಲಸ ಆರಂಭಗೊಂಡಿದ್ದು ಈ ವರ್ಷ ಪೂರ್ಣಗೊಳ್ಳುತ್ತಿವೆ. ಪ್ರವೇಶ ದ್ವಾರದಿಂದ ಹಿಡಿದು ಒಳಾಂಗಣದಲ್ಲಿ ಹಸಿರು ಗಿಡಿಗಳು ನಳನಳಿಸುತ್ತಿವೆ. ಹೋಗಿ ಬರಲು ಕಲ್ಲಿನ ಹಾಸುಗಳಿವೆ. ನಡುವೆ ಅಲ್ಲಲ್ಲಿ ಹಸಿರು ಹುಲ್ಲಿನ ಹಾಸು ಹಾಕಿದ್ದು ಆಕರ್ಷಣೀಯವಾಗಿದೆ. ರಸ್ತೆಗೆ ಹೊಂದಿಕೊಂಡು ಎರಡು ಶಿಲಾ ಮಂಟಪ ನಿರ್ಮಿಸಲಾಗಿದೆ. ಬಲ ಭಾಗದಲ್ಲಿ ಯುಟಿಲಿಟಿ ನಿರ್ಮಿಸಲಾಗಿದೆ. ಎಡ ಭಾಗದಲ್ಲಿ ಆಡಳಿತ ಕಚೇರಿ ಇದೆ. ಸಂಗೀತ ವಿದ್ಯಾಪಿಠದ ಆವರಣ, ಕರ್ತೃ ಗದ್ದುಗೆ ದರ್ಶನದ ಪ್ರವೇಶದ್ವಾರ ಮುಂಭಾಗ ನವೀಕರಣಗೊಂಡಿದೆ.
ನೂತನವಾಗಿ ಆಕರ್ಷಕವಾಗಿ ನಿಮಾರ್ಣಗೊಂಡ ತೆಂಗಿನ ಕಾಯಿ ಒಡೆವ ಮಂಟಪದ ಆವರಣ, ಕೆರೆ ಮುಂಭಾಗ, ದಾಸೋಹದ ಎದುರಿಗೆ ಇರುವ ಆವರಣ ಒಟ್ಟು ಒಂದುವರೆ ಲಕ್ಷ ಚದರ ಅಡಿಯ ವಿಶಾಲವಾದ ಹಸಿರು ಹುಲ್ಲು ಹಾಸಿಕೊಂಡಿದೆ. ಎಲ್ಲವೂ ಶ್ರೀಮಠದ ಸೊಬಗು, ಸೌಂದರ್ಯ ದುಪ್ಪಟ್ಟುಗೊಳಿಸಿವೆ. ಎಲ್ಲ ಮಂಟಪಗಳು ಅಚ್ಚು ಮಲ್ಲಿಗೆಯ ಬಿಳುಪಿನ ಸುಂದರ ಕೆತ್ತನೆಗಳನ್ನು ಒಳಗೊಂಡಿದೆ.
ಸಿದ್ಧಗೊಂಡ ಜಾತ್ರಾ ಆವರಣ
ಮಠದ ಮುಂಭಾಗದ 22 ಎಕರೆ ಪ್ರದೇಶದಲ್ಲಿ ರಥ ಬೀದಿ, ಜಾತ್ರೆ ಅಂಗವಾಗಿ ಒಂದು ಸಾವಿರ ಅಂಗಡಿಗೆ ಬೇಕಾದ ಸಿದ್ಧತೆ ಮಾಡಲಾಗಿದೆ. ಸ್ವಚ್ಛತೆ, ಮಾಕಿಂಗ್ ಕಾರ್ಯ ಪೂರ್ಣಗೊಂಡಿದೆ. ಬೃಹತ್ ದ್ವಾರ ಬಾಗಿಲು, ಅಂಗಡಿಗಳ ಮಧ್ಯೆ ಸಮತಟ್ಟಾದ ರಸ್ತೆ ನಿರ್ಮಾಣ ನಡೆಯುತ್ತಿದೆ. ಕಳ್ಳತನ ಹಾಗೂ ಶಿಸ್ತು ಕಾಪಾಡಲು ಅಲ್ಲಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುತ್ತಿದೆ. ಆರೋಗ್ಯ, ತುರ್ತು ಚಿಕಿತ್ಸಾ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ. ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಅಂಗಡಿಗಳಿಗೆ ಹೊಂದಿಕೊಂಡೇ ಎಲ್ಲ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ. ವ್ಯಾಪಾರ ಹಾಗೂ ಮನರಂಜನಾ ಆಟಿಕೆಗಳ ಅಂಗಡಿಗಳು ಇದೇ ಆವರಣದಲ್ಲಿ ತಲೆ ಎತ್ತಲಿವೆ.