

ಕೊಪ್ಪಳ: ನಗರದ ಗವಿಮಠ ಆವರಣದಲ್ಲಿ ಶುಕ್ರವಾರ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಚಿಣ್ಣರಿಗೆ ಅಕ್ಷರಭ್ಯಾಸ ಮಾಡಿಸಿದರು.
ಶಾಲೆಗೆ ದಾಖಲಾಗುವ ಮುನ್ನ ಮಕ್ಕಳಿಗೆ ಗುರುಗಳಿಂದ ಅಕ್ಷರಭ್ಯಾಸ ಮಾಡಿಸುವ ಸಂಪ್ರದಾಯವಿದೆ. ಜೂನ್ 1ರಿಂದ ಶಾಲೆಗಳು ಆರಂಭವಾಗಲಿವೆ. ತ್ರಿವಿಧ ದಾಸೋಹಕ್ಕೆ ಹೆಸರಾದ ಗವಿಮಠದಲ್ಲಿ ಕಳೆದ 9 ವರ್ಷದಿಮದ ಅಕ್ಷರಭ್ಯಾಸ ನಡೆಯುತ್ತಿದೆ. ದೂರದ ಶೃಂಗೇರಿಯಲ್ಲಿ ಅಕ್ಷರಭ್ಯಾಸ ಮಾಡಿಸಲಾಗುತ್ತಿದೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದ ಜನತೆಗೆ ಅಲ್ಲಿಗೆ ಹೋಗಲು ಅನನುಕೂಲವಾಗುತ್ತದೆ. ಗವಿಮಠವು ಅಕ್ಷರಭ್ಯಾಸ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿದೆ.
ದೂರದ ಜಿಲ್ಲೆಯವರು ಬೆಳಗ್ಗೆಯೇ ಗವಿಮಠದಲ್ಲಿ ಜಮಾಯಿಸಿದರು. ಕೊಪ್ಪಳ, ಹೊಸಪೇಟೆ, ಗದಗ ಸೇರಿ ಅಕ್ಕ&ಪಕ್ಕದ ಜಿಲ್ಲೆಯವರು ಆಗಮಿಸಿದರು. ಚಿಕ್ಕ ಮಕ್ಕಳು ಶ್ರೀಗಳಿಂದ ಅಕ್ಷರ ಕಲಿಯಲು ಹಲಗೆ&ಬಳಪ, ನೋಟ್ಬುಕ್ ಪೆನ್ ಹಿಡಿದು ನಿಂತಿದ್ದರು. ಗವಿಶ್ರೀಗಳು ಒಬ್ಬೊಬ್ಬರಿಗೆ ಓಂ, ಓಂ ಗವಿಸಿದ್ದೇಶ್ವರಾಯ ನಮ@ ಅಕ್ಷರಗಳನ್ನು ಕೈ ಹಿಡಿದು ಬರೆಸಿದರು. ಚಿಣ್ಣರು ಹಾಗೂ ಅವರ ಪಾಲಕರಿಗೆ ಆಶೀರ್ವಾದ ಮಾಡಿದರು. ಸಾವಿರಾರು ಮಕ್ಕಳು ಆಗಮಿಸಿದ್ದರಿಂದ ಗಂಟೆಗಟ್ಟಲೇ ಕಾರ್ಯಕ್ರಮ ಜರುಗಿತು. ಶ್ರೀಗಳು ಸಹನೆಯಿಂದಲೇ ಎಲ್ಲ ಮಕ್ಕಳಿಗೂ ಮೊದಲ ಅಕ್ಷರ ಬರೆಸಿದರು. ಕೆಲ ಮಕ್ಕಳನ್ನು ಮುದ್ದಾಡಿದರು. ಬಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಯಿತು.