ಭಕ್ತರ ಮುಂದೆ ಕಣ್ಣೀರಾದ ಗವಿಶ್ರೀಗಳು, ತಮಗೆ ನೋವಾಗುವ ಕೆಲಸ ಮಾಡದಂತೆ ಭಕ್ತರಿಗೆ ಮನವಿ

IMG-20250117-WA0206
Published on

ಕೊಪ್ಪಳ: ಗವಿಮಠದ ಹೆಸರು ಬಳಕೆ ಹಾಗೂ ಮತ್ತೊಬ್ಬ ಸ್ವಾಮೀಜಿ, ಮಠಕ್ಕೆ ತಮ್ಮನ್ನು ಹೋಲಿಕೆ ಮಾಡದಂತೆ ಭಕ್ತರಲ್ಲಿ ಮನವಿ ಮಾಡಿದ ಗವಿಮಠದ ಅಭಿನವ ಗವಿಶ್ರೀಗಳು ಭಾವುಕರಾಗಿ ಕಣ್ಣೀರಾದರು.

ಶುಕ್ರವಾರ ರಾತ್ರಿ ಹಮ್ಮಿಕೊಂಡಿದ್ದ ಜಾತ್ರೋತ್ಸವ ಸಮಾರೋಪ ಸಮಾರಂಭದಲ್ಲಿ ಭಕ್ತರನ್ನುದ್ದೇಶಿಸಿ ಮಾತನಾಡಿದರು.

ಗವಿಮಠ ಹಾಗೂ ಗವಿಸಿದ್ಧೇಶ್ವರನ ಹೆಸರನ್ನು ನಮ್ಮ ಮಠದ ಆವರಣ ಬಿಟ್ಟು ಹೊರಗೆ ಕೊಂಡೊಯ್ಯಬೇಡಿ. ಕೊಪ್ಪಳ ರೈಲ್ವೆ ನಿಲ್ದಾಣಕ್ಕೆ ಗವಿಸಿದ್ಧೇಶ್ವರ ರೈಲು ನಿಲ್ದಾಣವೆಂದು ಹೆಸರಿಡಲು ಅನೇಕರು ಮನವಿ ಮಾಡಿದರು. ಒತ್ತಾಯಿಸಿದರು. ಗವಿಸಿದ್ಧೇಶ್ವರ ನಿಮ್ಮ ಉಸಿರಿನಲ್ಲಿದ್ದಾನೆ. ಹೀಗಿರುವಾಗ ಮತ್ತೊಂದಕ್ಕೆ ಅವರ ಹೆಸರೇಕೆ ಬೇಕು ? ಇವತ್ತು ನಿಲ್ದಾಣಕ್ಕೆ, ನಾಳೆ ಮತ್ತೊಂದಕ್ಕೆ ಅವರ ಹೆಸರಿಡುವುದಾಗಿ ಮತ್ತೊಬ್ಬರು ಹೇಳುವುದು ಬೇಡವೆಂದು ವಿನಂತಿಸಿಕೊಂಡರು.

ನನ್ನ ಮೇಲೆ ಪ್ರೀತಿ, ವಿಶ್ವಾಸ ಇದೆ. ಹಾಗಂತ ಮತ್ತೊಬ್ಬ ಸ್ವಾಮೀಜಿಗೆ ನನ್ನನ್ನು ಹೋಲಿಸಿ ಸಾಮಾಜಿಕ ಜಾಲತಾಣದಲ್ಲಿ ವಿಮರ್ಶೆ ಮಾಡಬೇಡಿ. ಗವಿ ಮಠವನ್ನು ಮತ್ತೊಂದು ಮಠದೊಂದಿಗೆ ಹೋಲಿಸಬೇಡಿ. ನಾಡಿನ ಎಲ್ಲ ಪೂಜ್ಯರ ಪಾದದ ಧೂಳಿಗೆ ನಾನು ಸಮನಾದವನಲ್ಲ. ಇದೊಂದೇ ಅಲ್ಲ. ಜಾತಿ, ಧರ್ಮದ ವಿಷಯವಾಗಿ ನನ್ನನ್ನು ಎಲ್ಲೂ ಕರೆದುಕೊಂಡು ಹೋಗಬೇಡಿ ಎಂದು ಭಾವುಕರಾದರು.

ನಾನು ಯಾವ ಪ್ರಶಸ್ತಿಗೆ ಅರ್ಹನಲ್ಲ. ಅದನ್ನು ತಿರಸ್ಕರಿಸುವಷ್ಟು ಶಕ್ತನಲ್ಲ. ಹೀಗಾಗಿ ನನಗೆ ಯಾವುದೇ ಪ್ರಶಸ್ತಿ ನೀಡುವಂತೆ ಯಾರಿಗೂ ಒತ್ತಾಯ ಮಾಡಬೇಡಿ. ನನಗೆ ನಿಮ್ಮ ಸೇವೆಯೊಂದೇ ಸಾಕು. ನಾನು ಇದುವರೆಗೂ ಎಲ್ಲೂ ನನ್ನ ಫೋಟೋ ಹಾಕಿಕೊಂಡಿಲ್ಲ. ನಮ್ಮ ಗುರುಗಳ ಫೋಟೋ ಹಾಕಿರುವೆ. ನಾನು ಮಠದ ಆಳುಮಗ. ದೇಹದಲ್ಲಿ ಉಸಿರು ಇರುವವರೆಗೂ ಗವಿಸಿದ್ದಪ್ಪಜ್ಜ ಹಾಗೂ ನಿಮ್ಮ ಸೇವೆ ಮಾಡುವುದು ನನ್ನ ಕಾಯಕ. ಪೂಜೆ, ಓದು, ಸೇವೆ ನನ್ನ ಜೀವನದ ಗುರಿಗಳು. ದಯವಿಟ್ಟು ನನ್ನ ಭಾವನೆ ಅರ್ಥ ಮಾಡಿಕೊಳ್ಳಿ ಎಂದು ಕ್ಷಣಕಾಲ‌ ಕಣ್ಣೀರಾಗಿ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net