ಅಜ್ಜನ ಜಾತ್ರೆಗೆ ಭಕ್ತಿಯ ತೆರೆ, ಗೋಧಿ ಹುಗ್ಗಿ ಸವಿದ ಭಕ್ತಗಣ

district koppal gavimath gavishree dasoha jaathra
Published on

ಕೊಪ್ಪಳ: ದಣ ಭಾರತದ ಕುಂಭಮೇಳ, ಭಕ್ತರ ಜಾತ್ರೆ, ಜಾಗೃತಿ ಜಾತ್ರೆ ಎಂದು ಖ್ಯಾತಿಯಾಗಿರುವ ಗವಿಸಿದ್ದೇಶ್ವರ ಜಾತ್ರೋತ್ಸವಕ್ಕೆ ಬುಧವಾರ ಭಕ್ತಿಯ ತೆರೆ ಬಿದ್ದಿತು. ಅಮವಾಸ್ಯೆ ಹಿನ್ನೆಲೆ ಅಪಾರ ಸಂಖ್ಯೆಯ ಭಕ್ತರು ಶ್ರೀಮಠಕ್ಕೆ ಧಾವಿಸಿ ಗವಿಸಿದ್ದೇಶನ ದರ್ಶನ ಪಡೆದು ಪುನೀತರಾದರು.

ಜ.15ರಂದು ಮಹಾರಥೋತ್ಸವ ನಡೆದಿದೆ. ಜ.11ರಂದು ಜಾಗೃತಿ ಜಾಥಾ ಮೂಲಕ ದಾಸೋಹ ಆರಂಭವಾಗಿತ್ತು. ಸತತ 18 ದಿನಗಳ ಮಹಾದಾಸೋಹ ಭವನದ ಒಲೆಗಳು ನಿರಂತರ ಉರಿದಿವೆ. ಹಗಲಿರುಳು ಭಕ್ತರಿಗಾಗಿ ಬಗೆ ಬಗೆ ಖಾದ್ಯ ಉಣಬಡಿಸಿದೆ. ಪ್ರತಿನಿತ್ಯ ಲಾಂತರ ಭಕ್ತರು ಅಜ್ಜನ ಪ್ರಸಾದ ಸವಿದಿದ್ದಾರೆ. ಸಹಸ್ರಾರು ಕೈಗಳು ಹತ್ತಾರು ಸೇವೆ ಮಾಡಿವೆ. ರೊಟ್ಟಿ, ಜಿಲೇಬಿ, ಮಿರ್ಚಿ, ಬೂಂದಿ, ಮಾದಲಿ, ಹೋಳಿಗೆ, ಖರ್ಚಿಕಾಯಿ ಹೀಗೆ ಖಾದ್ಯಗಳ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಕೊನೆಯ ದಿನವಾದ ಬುಧವಾರ ಗೋಧಿ ಹುಗ್ಗಿ, ಹಾಲು, ಬದನೆಕಾಯಿ ಪಲ್ಯ, ಅನ್ನ&ಸಾಂಬಾರ್​ ಮಾಡಲಾಗಿತ್ತು.

ಹಲವು ಕೊಪ್ಪರಿಕೆಗಳಲ್ಲಿ ಮಂಗಳವಾರ ರಾತ್ರಿಯಿಂದಲೇ ಗೋಧಿ ಹುಗ್ಗಿ ಸಿದ್ಧಗೊಳಿಸಲಾಯಿತು. ಗವಿಶ್ರೀಗಳು ನಸುಕಿನಿಂದಲೇ ದಾಸೋಹ ಭವನಕ್ಕೆ ಧಾವಿಸಿ ಎಲ್ಲ ಸಿದ್ಧತೆ ಪರಿಶೀಲಿಸಿದರು. ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರೆಗೆ ಆಗಮಿಸಿದ್ದಾರೆ. ಕೊನೆಯ ದಿನ ಹಾಗೂ ಅಮವಾಸ್ಯೆ ಅಂಗವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದರು. ಬೆಳಗಿನಿಂದಲೇ ಗದ್ದುಗೆ ದರ್ಶನಕ್ಕೆ ಸರತಿ ನಿಂತರು. ಕರ್ತೃ ಗದ್ದುಗೆಯಿಂದ ಮಠದ ಆವರಣದವರೆಗೆ ಸಾಲು ನಿಂತಿದ್ದು ಕಂಡುಬಂತು. ಗದ್ದುಗೆ ದರ್ಶನ ಬಳಿಕ, ಅಜ್ಜನ ಆಶೀರ್ವಾದ ಪಡೆದು ಪ್ರಸಾದ ಸೇವಿಸಿದರು.

ಸಾಮಾನ್ಯರು, ವಿವಿಧ ಸಂ, ಸಂಸ್ಥೆ ಪ್ರತಿನಿಧಿಗಳು, ಸರ್ಕಾರಿ, ಖಾಸಗಿ ನೌಕರರು ಎಲ್ಲರೂ ಪ್ರಸಾದ ಸೇವಿಸಿದರು. ಜಾತ್ರಾ ಆವರಣವೂ ಜನರಿಂದ ತುಂಬಿ ತುಳುಕಿತು. ರಾತ್ರಿ ಸದ್ದು ಮಾಡುತ್ತಿದ್ದ ಜೋಕಾಲಿ ಹಾಗೂ ಇತರ ಆಟಿಕೆಗಳು ಬೆಳಗಿನಿಂದಲೇ ಶುರುವಾದವು. ಬಳೆ ಅಂಗಡಿಗಳಲ್ಲಿ ಮಹಿಳೆಯರ ದಂಡು ಕಾಣಿಸಿತು. ಬೆಳಗಿನಿಂದ ತಡರಾತ್ರಿವರೆಗೆ ಜಾತ್ರಾ ಆವರಣ ಭಕ್ತರಿಂದ ತುಂಬಿದ್ದು ಕಂಡುಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net