ಗವಿಮಠಕ್ಕೆ 101 ಕ್ವಿಂಟಾಲ್​ ಅಕ್ಕಿ ದೇಣಿಗೆ

district koppal gavimath gavishree basanagouda partil yatnal visit
Published on

ಕೊಪ್ಪಳ: ನಗರದ ಗವಿಮಠಕ್ಕೆ ಬುಧವಾರ ಭೇಟಿ ನೀಡಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ ಶ್ರೀ ಸಿದ್ದೇಶ್ವರ ಸಂಸ್ಥೆಯಿಂದ ಮಠಕ್ಕೆ 101 ಕ್ವಿಂಟಾಲ್​ ಅಕ್ಕಿ, 5001 ವಿಭೂತಿ, ತಲಾ ಐದು ಕೆಜಿ ಕುಂಕುಮ ಹಾಗೂ ತುಪ್ಪ ಅರ್ಪಿಸಿ ಶ್ರೀಗಳ ಆಶೀರ್ವಾದ ಪಡೆದರು.

ಸಿದ್ದಸಿರಿ ಸೌಹಾರ್ದ ಸಹಕಾರಿ ಸಂದ ಪದಾಧಿಕಾರಿಗಳೊಂದಿಗೆ ಆಗಮಿಸಿದ ಯತ್ನಾಳ್​, ಶ್ರೀಗಳ ಕುಶಲೋಪರಿ ವಿಚಾರಿಸಿದರು. ಸಿದ್ದೇಶ್ವರ ಸಂಸ್ಥೆ ಬಗ್ಗೆ ಮಾತನಾಡಿದರು. ಬಳಿಕ ಪ್ರಸಾದ ನಿಲಯಕ್ಕೆ ತೆರಳಿ ಪ್ರಸಾದ ಸೇವಿಸಿದರು.

ನಂತರ ಮಾತನಾಡಿ, ಗವಿಮಠ ನಾಡು ಕಂಡ ಶ್ರೇಷ್ಠ ಮಠಗಳಲ್ಲಿ ಒಂದು. ತುಮಕೂರಿನ ಸಿದ್ದಗಂಗಾ ಮಠದಂತೆ ಗವಿಮಠವೂ ತ್ರಿವಿಧ ದಾಸೋಹ ಮಾಡುತ್ತಿದೆ. ಶ್ರೀಗಳು ಭಕ್ತರು, ಮಠದ ಬಗ್ಗೆ ಕಳಕಳಿ ಹೊಂದಿದ್ದಾರೆ. ನಾಡಿನ ಮೂಲೆ ಮೂಲೆಗಳಿಂದ ಭಕ್ತರು ಮಠಕ್ಕೆ ಆಗಮಿಸುತ್ತಾರೆ. ಇದೆಲ್ಲವನ್ನು ಕಂಡು ಹರ್ಷ ಎನಿಸುತ್ತಿದೆ. ಶ್ರೀಗಳೆಂದರೆ ಗವಿಶ್ರೀಗಳಂತಿರಬೇಕು. ರಾಜಕೀಯ ಮಾಡಬಾರದು. ಮಠ ಕಟ್ಟಬೇಕು. ಮಕ್ಕಳಿಗೆ ಶಿಕ್ಷಣ ನೀಡಬೇಕು. ಶ್ರೀಗಳ ಕಾರ್ಯಕ್ಕೆ ನಮ್ಮದೂ ಅಳಿಲು ಸೇವೆ ಇರಲೆಂದು ಅಕ್ಕಿ, ವಿಭೂತಿ, ಕುಂಕುಮ, ತುಪ್ಪ ದೇಣಿಗೆ ಅರ್ಪಿಸಿದ್ದೇವೆಂದು ತಿಳಿಸಿದರು.

ಶ್ರೀ ಸಿದ್ದೇಶ್ವರ ಸಂಸ್ಥೆಯ ಚೇರಮನ್​ ಬಸಯ್ಯ ಹಿರೇಮಠ, ಉಪಾಧ್ಯಕ್ಷ ಸಂಗನಬಸಪ್ಪ ಸಜ್ಜನ, ನಿರ್ದೇಶಕರಾದ ಬಸವರಾಜ ಸೂಗೂರ, ಸದಾಶಿವ ಗುಡ್ಡೋಡಗಿ, ಎನ್​.ಎಂ.ಗೊಲಾಯಿ, ಮಲ್ಲಿಕಾರ್ಜುನ ಹಕ್ಕಾಪಕ್ಕಿ, ಮಲಕಪ್ಪ ಗಾಣಿಗೇರ, ಸಾಯಿಬಣ್ಣ ಭೋವಿ, ಸಹಕಾರಿ ಸಂಘ ನಿಯಮಿತ ನಿರ್ದೇಶಕರಾದ ಪ್ರಭುಗೌಡ ದೇಸಾಯಿ, ಕನಕಗೌಡರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net