

ಕೊಪ್ಪಳ: ಅಪರೂಪದ ಹೈಡ್ರೋ ಗಾಂಜಾ ಮಾರಾಟ ಜಾಲ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಥೈಲ್ಯಾಂಡ್ನಿಂದ ಅಕ್ರಮವಾಗಿ ತಂದಿದ್ದ 1.8 ಕೆಜಿ ಅಮಲು ಪದಾರ್ಥವನ್ನು ಮಾರಾಟಗಾರರ ಸಮೇತ ಪೊಲೀಸರು ಬೇಟೆಯಾಡಿದ್ದಾರೆ.
ಅತಿಹೆಚ್ಚು ಅಮಲು ನೀಡುವ ಹೈಡ್ರೋ ಗಾಂಜಾವನ್ನು ಹೈದ್ರಾಬಾದ್ ಮಾರ್ಗವಾಗಿ ಗಂಗಾವತಿಗೆ ಸಾಗಿಸಲಾಗಿದೆ. ಮುಂದೆ ಬೇರೆಡೆ ವರ್ಗಾಯಿಸಬೇಕೆನ್ನುವಷ್ಟರಲ್ಲಿ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ಕೇರಳದ ಮೂವರು ಹಾಗೂ ಬಳ್ಳಾರಿ ಮೂಲದ ಐವರು ಎರಡು ಕಾರ್ಗಳಲ್ಲಿ ಅಕ್ರಮವಾಗಿ ಗಾಂಜಾ ಸಾಗಣೆ ಮಾಡುತ್ತಿದ್ದರು. ಇದರ ಮೌಲ್ಯ 18.06 ಲಕ್ಷ ರೂ. ಆಗಿದ್ದು ಜಿಲ್ಲೆಯಲ್ಲಿ ಮೊದಲ ಬಾರಿ ಇಂಥ ಪ್ರಕರಣ ಬೆಳಕಿಗೆ ಬಂದಿದೆ. ಕೇರಳದ ಕಣ್ಣೂರಿನ ಸೌಜೇಶ ಕೆ.ಕೆ., ಸಲೀಂ ಪಿ.ಪಿ. ಮತ್ತು ಕೇರಳದ ತ್ರೀಶೂರ್ನ ಬಾದಷಾ ಪ್ರಮುಖರ ಆರೋಪಿಗಳು. ಬಳ್ಳಾರಿಯ ದುರ್ಗಾಪ್ರಸಾದ್ ಬಿ., ಮದನ್, ಸೂರ್ಯಪ್ರತಾಪ ರೆಡ್ಡಿ, ಮಹ್ಮದ್ ಅಮಿದ್ ಮತ್ತು ಮಣಿಕಂಠ ಬಂಧಿತ ಆರೋಪಿಗಳು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿ ವಿವರ ನೀಡಿದರು.
ಆರೋಪಿಗಳೆಲ್ಲ ಸುಶಿತರಾಗಿದ್ದಾರೆ. ಮದನ್ ಬಿಇ ಪದವಿ ಪಡೆದಿದ್ದರೆ, ದುರ್ಗಾ ಪ್ರಸಾದ್ ಬಿಕಾಂ, ಸಲಿಂ ಪಿಯುಸಿ ಶಿಕ್ಷಣ ಪಡೆದಿದ್ದಾನೆ. ಸೌಜೇಶ ಮೊಬೈಲ್ ಅಂಗಡಿ ನಡೆಸುತ್ತಿದ್ದಾನೆ. ಗಾಂಜಾ ಜತೆಗೆ 2 ಕಾರ್ ಮತ್ತು 8 ಮೊಬೈಲ್ ಪೊಲೀಸರ ಕೈ ಸೇರಿವೆ. ಬಯಲಿನಲ್ಲಿ ಬೆಳೆಯದ ಹಾಗೂ ಬಹಳ ಗುಟ್ಟಾಗಿ ಇಂಥ ಗಾಂಜಾ ಬೆಳೆಯಲಾಗುತ್ತದೆ. ಬಹುತೇಕ ವಿಮಾನ ನಿಲ್ದಾಣಗಳಲ್ಲಿ ಸಾಗಣೆ ಮಾಡುವಾಗ ಸಿಕ್ಕ ಉದಾಹರಣೆಗಳಿವೆ. ಮೊದಲ ಬಾರಿಗೆ ಗಂಗಾವತಿ ನಗರದಿಂದ ಸೂರ್ಯನಾಯ್ಕ ತಾಂಡಾಕ್ಕೆ ಹೋಗುವ ದಾರಿಯಲ್ಲಿ ಬರುವ ಐಟಿಐ ಕಾಲೇಜು ಮುಂಭಾಗದಲ್ಲಿ ದೊರೆತಿರುವುದು ಜಿಲ್ಲೆಯಲ್ಲಿ, ಅದರಲ್ಲೂ ಗಂಗಾವತಿ, ಆನೆಗೊಂದಿ ಭಾಗದಲ್ಲಿ ಜಾಲ ವಿಸ್ತರಣೆಯ ಅನುಮಾನ ಹುಟ್ಟುಹಾಕಿದೆ.