

ಕೊಪ್ಪಳ: ಗಂಗಾವತಿ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ವೆಂಕಟೇಶ ಕುರುಬರ ಕೊಲೆ ಆರೋಪಿಗಳು ಬಳ್ಳಾರಿ ಜಿಲ್ಲೆಯ ಕಂಪ್ಲಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾರೆ. ಸಂಸದ ರಾಜಶೇಖರ ಹಿಟ್ನಾಳ ಗಂಗಾವತಿಗೆ ಭೇಟಿ ನೀಡಿ ಘಟನೆ ಮಾಹಿತಿ ಪಡೆದರು.
ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳು ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾರೆ. ಅವರನ್ನು ವಶಕ್ಕೆ ಪಡೆಯಲು ಗಂಗಾವತಿ ಪೊಲೀಸರು ತೆರಳಿದ್ದಾರೆ. ಹತ್ಯೆಗೆ ಹಳೇ ವೈಷಮ್ಯವೇ ಕಾರಣ ಎನ್ನಲಾಗಿದೆ. ಕೊಲೆಗೆ ಸಂಬಂಧಿಸಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾದ ಲಿಂಗರಾಜ ಕ್ಯಾಂಪಿನ ರವಿ ಮತ್ತು ಸಹಚರರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಸಿಟಿವಿ ದೃಶ್ಯ ಲಭ್ಯ: ಹತ್ಯೆಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೈಕ್ ನಲ್ಲಿ ಸಾಗುತ್ತಿದ್ದ ವೆಂಕಟೇಶನಿಗೆ ಇಂಡಿಕಾ ಕಾರ್ ನಲ್ಲಿ ಬಂದ ಆರೋಪಿಗಳು ಅಪಘಾತ ಮಾಡಿದ್ದಾರೆ. ಬಿದ್ದ ತಕ್ಷಣ ಸ್ಥಳದಲ್ಲಿದ್ದವರು ನೆರವಿಗೆ ಧಾವಿಸಿದ್ದಾರೆ. ಅಷ್ಟರಲ್ಲಿ ಕಾರಿನಿಂದ ಮಾರಕಾಸ್ತ್ರ ಹಿಡಿದು ಬಂದ ಆರೋಪಿಗಳು ಸತತ ಹಲ್ಲೆ ಮಾಡಿ ಕೊಲೆಗೈದಿದ್ದಾರೆ. ಇದರಿಂದ ಹೆದರಿದ ಸ್ಥಳಿಯರು ದೂರ ಓಡಿದ್ದಾರೆ.
ಸಂಸದ ಭೇಟಿ: ಕೊಲೆ ಹಿನ್ನೆಲೆಯಲ್ಲಿ ಕೊಪ್ಪಳ ಸಂಸದ ರಾಜಶೇಶಖರ ಹಿಟ್ನಾಳ ಗಂಗಾವತಿಗೆ ಭೇಟಿ ನೀಡಿದರು. ಪೊಲೀಸ್ ಠಾಣೆಗೆ ತೆರಳಿ ಕೊಲೆ ಮಾಹಿತಿ ಪಡೆದರು. ಆರೋಪಿಗಳು ಯಾರೇ ಇದ್ದರೂ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದರು. ವೆಂಕಟೇಶ ಸಮಾಜ ಸೇವೆಯಲ್ಲಿ ತೊಡಗಿದ್ದ. ಯಾಕೆ ಕೊಲೆ ಮಾಡಿದರೆಂಬ ಸ್ಪಷ್ಟತೆ ಇಲ್ಲ. ಹಳೇ ವೈಷಮ್ಯ ಕಾರಣ ಎನ್ನಲಾಗುತ್ತಿದೆ. ಅಂತಿಮ ಸಂಸ್ಕಾರ ಬಳಿಕ ಕುಟುಂಬದವರಿಂದ ಮಾಹಿತಿ ಪಡೆಯುವೆ ಎಂದರು.