

ಕೊಪ್ಪಳ: ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ವಿಚಾರಧಾರೆಗಳನ್ನು ಜಾಗತೀಕರಣದ ಅವಧಿ ಅರ್ಥೈಸಿಕೊಳ್ಳುವಲ್ಲಿ ಎಡವಿದೆ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ಹೇಳಿದರು.
ನಗರದ ಜೆಡಿಎಸ್ ಜಿಲ್ಲಾ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗಾಂಧಿ ಮತ್ತು ಶಾಸ್ತ್ರಿ ಅಭಿವೃದ್ಧಿಗಿಂತ ಸವೋರ್ದಯಕ್ಕೆ ಆದ್ಯತೆ ನೀಡಿದರು. ಸುಸ್ಥಿರ ಅಭಿವೃದ್ಧಿ ಒತ್ತಿ ಹೇಳಿದ್ದರು. ಶ್ರಮ ಹಾಗೂ ಸರಳತೆ ಮಾರ್ಗ ತಿಳಿಸಿದರು. ಮೂರು ದಶಕಗಳ ಜಾಗತೀಕರಣದ ಅವಧಿಯಲ್ಲಿ ನಮ್ಮ ವ್ಯವಸ್ಥೆ ಈ ತತ್ವಗಳ ವಿರುದ್ಧ ಹೋಗಿದೆ. ಹೀಗಾಗಿ ಅನೇಕ ಜ್ವಲಂತ ಸಮಸ್ಯೆಗಳು ಉದ್ಭವಿಸಿವೆ. ಈ ನಾಯಕರ ವಿಚಾರಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವಲ್ಲಿ ವಿಫಲವಾಗಿದ್ದು ಅದಕ್ಕೆ ಮುಖ್ಯ ಕಾರಣ ಎಂದರು.
ಜೆಡಿಎಸ್ ನಗರ ಅಧ್ಯಕ್ಷ ಸೋಮನಗೌಡ ಹೊಗರನಾಳ, ಉಪಾಧ್ಯಕ್ಷ ಮೂರ್ತ್ಯಪ್ಪ ಹಿಟ್ನಾಳ್, ಒಬಿಸಿ ಜಿಲ್ಲಾ ಅಧ್ಯಕ್ಷ ಕರಿಯಪ್ಪ ಹಾಲವರ್ತಿ, ಶಿವಕುಮಾರ್ ಏಣಿಗಿ, ರೋಹಿತ್ ಹಣವಾಳ, ಸುರೇಶ್ ದದೇಗಲ್, ಕೃಷ್ಣ ಇತರರಿದ್ದರು.