ಕೊಪ್ಪಳ ಪ್ರವಾಸಿ ಶೃಂಗಕ್ಕೆ ಕ್ರಿಯಾ ಯೋಜನೆ

district koppal fort hulikere lake tourism action plan
Published on

ವಿಜಯವಾಣಿ ವಿಶೇಷ ಕೊಪ್ಪಳ

ಜಿಲ್ಲೆಯ ಪ್ರವಾಸಿ ತಾಣಗಳ ಮೇಲೆ ಬೆಳಕು ಚೆಲ್ಲಲು ಪುರಾತತ್ವ ಇಲಾಖೆಯಿಂದ ಪ್ರವಾಸಿ ವೃತ್ತ ಹೆಸರಿನಲ್ಲಿ ಅಭಿವೃದ್ಧಿಗೆ ಜಿಲ್ಲಾಡಳಿತ ಮುಂದಾಗಿದೆ. ಪ್ರಮುಖ ಟೂರಿಸ್ಟ್​ ತಾಣಗಳನ್ನು ಬೆಸೆಯಲು ಕ್ರಿಯಾ ಯೋಜನೆ ಸಿದ್ಧಪಡಿಸುತ್ತಿದ್ದು, ಮೂಲ ಸೌಕರ್ಯ ಕಲ್ಪಿಸಲು ಸಿದ್ಧತೆ ನಡೆಸಿದೆ.

ಬಯಲು ಸೀಮೆ ಹಾಗೂ ನೀರಾವರಿ ಸೌಲಭ್ಯ ಎರಡನ್ನೂ ಹೊಂದಿರುವ ಕೊಪ್ಪಳ ಇತಿಹಾಸ ಮತ್ತು ಪೌರಾಣಿಕ ಹಿನ್ನೆಲೆಯುಳ್ಳ ಪ್ರವಾಸಿ ತಾಣಗಳನ್ನು ತನ್ನೊಡಲಲ್ಲಿ ಅಡಗಿಸಿಟ್ಟುಕೊಂಡಿದೆ. ಜಗತ್ತಿನಲ್ಲಿ ಶ್ರೀಮಂತ ಆಡಳಿತಕ್ಕೆ ಒಳಪಟ್ಟಿದ್ದ ವಿಜಯನಗರ ಸಾಮ್ರಾಜ್ಯ ಆನೆಗೊಂದಿಯನ್ನು ಮೊದಲ ರಾಜಧಾನಿಯನ್ನಾಗಿಸಿಕೊಂಡು ಆಳಿರುವ ಬಹುದೊಡ್ಡ ಇತಿಹಾಸವಿದೆ. ಇದೇ ಪ್ರದೇಶ ರಾಮಾಯಣದ ಕಿಷ್ಕಿಂಧಾ ಭಾಗವೆಂಬುದು ಮತ್ತೊಂದು ವಿಶೇಷ. ಅಲ್ಲದೇ ಆದಿ ಮಾನವನ ಹೆಜ್ಜೆ ಗುರುತುಗಳಿರುವ ಪ್ರಾಗೈತಿಹಾಸ ಕಾಲದ ಗವಿ ವರ್ಣ ಚಿತ್ರಗಳು, ಮಡಿಕೆ, ಕುಡಿಕೆ ಇನ್ನಿತರ ಅವಶೇಷಗಳೂ ಪತ್ತೆಯಾಗಿದ್ದು ಜಿಲ್ಲೆಗೆ ಎಲ್ಲ ವಿಧದಲ್ಲೂ ಬಹುದೊಡ್ಡ ಪರಂಪರೆ ಇರುವುದು ಅರಿವಿಗೆ ಬರಲಿದೆ.

ಇವೆಲ್ಲ ಮಾಹಿತಿಯನ್ನು ಜಗತ್ತಿಗೆ ಪರಿಚಯಿಸುವ ಜತೆಗೆ ಪ್ರವಾಸೋದ್ಯಮ ಬೆಳವಣಿಗೆಗೆ ವಿುಲ ಅವಕಾಶಗಳಿದ್ದರೂ ಜನಪ್ರತಿನಿಧಿಗಳು, ಆಡಳಿತ ವರ್ಗ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇದು ಜಿಲ್ಲೆಯ ಐತಿಹಾಸಿ ಶ್ರೀಮಂತಿಕೆಗೆ ಬಹುದೊಡ್ಡ ಹಿನ್ನಡೆ ಎನ್ನಬಹುದು. ಸದ್ಯ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಮುತವರ್ಜಿ ವಹಿಸಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಆಸಕ್ತಿ ತೋರುತ್ತಿದೆ. ಪ್ರಮುಖ ಪ್ರವಾಸಿ ತಾಣಗಳನ್ನು ಬೆಸೆವ ನಿಟ್ಟಿನಲ್ಲಿ ಸಮಗ್ರ ಕ್ರಿಯಾ ಯೋಜನೆ ತಯಾರಿಕೆಗೆ ಮುಂದಾಗಿದೆ. ಧಾರ್ಮಿಕ ದತ್ತಿ, ಪ್ರವಾಸೋದ್ಯಮ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ನಿಧಿ, ಭಾರತೀಯ ಪುರಾತತ್ವ, ರಾಜ್ಯ ಪುರಾತತ್ವ ಇಲಾಖೆ ಅನುದಾನ ಬಳಸಿ ಸಮಗ್ರ ಅಭಿವೃದ್ಧಿಗೆ ಯೋಜಿಸುತ್ತಿದೆ.

ಈಗಾಗಲೇ ಹುಲಿಗಿಯ ಹುಲಿಗೆಮ್ಮ ದೇವಿ, ಅಂಜನಾದ್ರಿ ಆಂಜನೇಯ ದೇವಸ್ಥಾನ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಿದೆ. ಯೋಜನೆ ಸಿದ್ಧಪಡಿಸಿ ಅನುಷ್ಠಾನಕ್ಕೆ ಮುಂದಾಗಿದೆ. ಉಳಿದಂತೆ ಕನಕಗಿರಿ ಕನಕಾಚಲಪತಿ ದೇವಾಲಯ ಸೇರಿ ಇತರ ಸ್ಮಾರಕಗಳು, ಹಿರೇ ಬೆಣಕಲ್​ ಮೊರೆರ ಬೆಟ್ಟ, ಜಬ್ಬಲಗುಡ್ಡದ ಗಂಡುಗಲಿ ಕುಮಾರರಾಮ ಬೆಟ್ಟ, ಕೊಪ್ಪಳ ಕೋಟೆ, ಹುಲಿಕೆರೆ, ಮೋತಿ ಕೆರೆ, ಇರಕಲ್​ ಗಡಾ, ಬಹಾದ್ದೂರಬಂಡಿ ಕೋಟೆ, ಪುರ ಸೋಮನಾಥ ದೇವಾಲಯ, ಚಂದಾಲಿಂಗೇಶ್ವರ ದೇವಾಲಯ, ಕಬ್ಬರಗಿ ಜಲಪಾತ, ಇಟಗಿ ಮಹಾದೇವ ದೇವಾಲಯ, ಮಹಾಮಾಯ ಗುಡಿ, ನವ ಲಿಂಗೇಶ್ವರ ಸೇರಿ ಇನ್ನು ಅನೇಕ ತಾಣಗಳಿವೆ. ಇವುಗಳನ್ನು ಒಂದೇ ಪ್ರವಾಸಿ ಸೂರಿನಡಿ ತರಬೇಕಿದೆ.

ಜತೆಗೆ ಈ ಬಗ್ಗೆ ರಾಜ್ಯ, ರಾಷ್ಟ್ರ, ಅಂತಾರಾಷ್ಟೀಯ ಮಟ್ಟದಲ್ಲಿ ಪ್ರಚಾರ ದೊರೆಯುವಂತೆ ಮಾಡಬೇಕು. ಬರುವ ಪ್ರವಾಸಿಗರಿಗೂ ಅವರ ಆದ್ಯತೆ ಅನುಸಾರ ಸೌಲಭ್ಯಗಳನ್ನು ಕಲ್ಪಿಸಬೇಕು. ಅಂದಾಗ ಪ್ರವಾಸೋದ್ಯಮ ಬೆಳವಣಿಗೆ ಸಾಧ್ಯ. ಈ ನಿಟ್ಟಿನಲ್ಲಿ ಪ್ರತ್ಯೇಕ ಪ್ರವಾಸಿ ನೀತಿ ರೂಪಿಸಬೇಕು. ಜಿಲ್ಲೆಯ ಸಚಿವ, ಶಾಸಕರು ಸರ್ಕಾರದ ಗಮನ ಸೆಳೆದು ವಿಶೇಷ ಅನುದಾನ ಕೊಡಿಸಿದಲ್ಲಿ ಭವಿಷ್ಯದಲ್ಲಿ ರಾಜ್ಯದಲ್ಲಿಯೇ ಕೊಪ್ಪಳ ಮಾದರಿ ಪ್ರವಾಸಿ ಜಿಲ್ಲೆಯಾಗಲಿದೆ.

ಸಮಗ್ರ ಯೋಜನೆಗೆ ತಯಾರಿ

ಪ್ರವಾಸಿ ತಾಣಗಳು ವಿುಲವಾಗಿದ್ದರೂ ಪ್ರವಾಸಿಗರಿಗೆ ಮೂಲ ಸೌಕರ್ಯಗಳಿಲ್ಲ. ಕುಡಿವ ನೀರು, ಉತ್ತಮ ರಸ್ತೆ, ಶೌಚಗೃಹ, ಕೂಡಲು ವ್ಯವಸ್ಥೆ ಕಲ್ಪಿಸಬೇಕಿದೆ. ಈ ಸಂಬಂಧ ಕ್ರಿಯಾ ಯೋಜನೆ ತಯಾರಿಸಲಾಗುತ್ತಿದೆ. ಹಿರೇ ಬೆಣಕಲ್​ ಮೊರೆರ ಬೆಟ್ಟ, ಕನಕಗಿರಿ ಸ್ಮಾರಕಗಳು, ಕುಮಾರರಾಮ ಬೆಟ್ಟ, ಕೊಪ್ಪಳ ಕೋಟೆ, ಹುಲಿಕೆರೆ, ಮೋತಿ ಕೆರೆಗಳ ಅಭಿವೃದ್ಧಿಗೆ ಮೊದಲ ಹಂತದ ಯೋಜನೆ ಸಿದ್ಧಗೊಂಡಿದೆ. ಕೊಪ್ಪಳ ಕೋಟೆ ಬಳಿ ಮ್ಯೂಜಿಯಂ ನಿರ್ಮಿಸಲು ಜಿಲ್ಲಾಡಳಿತ ಮುಂದಾಗಿದೆ. ಅಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳ ಮಾಹಿತಿ ಒಳಗೊಂಡಿರಲಿದೆ. ನಗರ, ಸ್ಥಳಿಯ ಸಂಸ್ಥೆಗಳ ನಿಧಿ, ಕೆಕೆಆರ್​ಡಿಬಿ, ಪ್ರವಾಸೋದ್ಯಮ ಹಾಗೂ ಪುರಾತತ್ವ ಇಲಾಖೆಗಳಿಗೆ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. ಆರಂಭದಲ್ಲಿ ಮಾಹಿತಿ ಲಕ, ರಸ್ತೆ, ಕುಡಿವ ನೀರು, ಶೌಚಗೃಹ ಇನ್ನಿತರ ಸೌಕರ್ಯ ಕಲ್ಪಿಸುವ ಕಾರ್ಯ ನಡೆದಿದೆ. ಈಗಾಗಲೇ 150ಕ್ಕೂ ಹೆಚ್ಚು ತಾಣಗಳಲ್ಲಿ ಮಾಹಿತಿ ಲಕ ಅಳವಡಿಸಲಾಗಿದೆ. ಬಾಕಿ ಸ್ಮಾರಕಗಳಿಗೂ ಅಳವಡಿಕೆ ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net