

ಕೊಪ್ಪಳ: ಉತ್ತಮ ಆಹಾರ ಪಡೆಯಲು ಸಾವಯವ ಕೃಷಿ ಉತ್ತೇಜಿಸಬೇಕಿದೆ. ಕೃಷಿ ಮತ್ತು ಪಶು ಸಖಿಯರು ಇಲಾಖೆ ಯೋಜನೆಗಳನ್ನು ಜನರಿಗೆ ತಲುಪಿಸುವಂತೆ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಸೂಚಿಸಿದರು.
ನಗರದ ಜಿಪಂ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಆಹಾರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಲ್ಲರಿಗೂ ಗುಣಮಟ್ಟದ ಆಹಾರ ದೊರೆಯಬೇಕು. ಈ ವರ್ಷ ಉತ್ತಮ ಆಹಾರ ಮತ್ತು ಉತ್ತಮ ಭವಿಷ್ಯಕ್ಕೆ ಕೈ ಜೋಡಿಸಿ ಎಂಬುದು ಘೋಷವಾಕ್ಯ. ಸ್ವಾತಂತ್ರ$್ಯ ಬಂದಾಗ ದೇಶದ ಜನಸಂಖ್ಯೆ 35 ಕೋಟಿ ಇತ್ತು. ಸದ್ಯ 146 ಕೋಟಿ ಆಗಿದೆ. ಪ್ರತಿಯೊಬ್ಬರಿಗೂ ಆಹಾರ ಭದ್ರತೆ ಒದಗಿಸಲು 2013ರಲ್ಲಿ ಅಂದಿನ ಪ್ರಧಾನಿ ಡಾ.ಮನಮೋಹನ ಸಿಂಗ್ ಸರ್ಕಾರ ಆಹಾರ ಭದ್ರತಾ ಕಾಯ್ದೆ ಜಾರಿ ಮಾಡಿತು. ಅಂತ್ಯೋದಯ ಅನ್ನ ಯೋಜನೆಯಡಿ 35 ಕೆ.ಜಿ ಅಕ್ಕಿ, ಬಡ ಕುಟುಂಬಗಳಿಗೆ 5 ಕೆ.ಜಿ ಅಕ್ಕಿ ಹಾಗೂ ಇತರ ಧಾನ್ಯಗಳನ್ನು ನೀಡಲಾಗುತ್ತಿದೆ. ಈಗಿನ ಮಕ್ಕಳು ಾಸ್ಟ್ುಡ್, ಜಂಕ್ ುಡ್ ಹೆಚ್ಚು ಸೇವಿಸುತ್ತಿದ್ದಾರೆ. ಇದರಿಂದ ಆರೋಗ್ಯ ಹಾಳಾಗಲಿದೆ ಎಂದರು.
ಕೃಷಿಯಲ್ಲಿ ರಸಾಯನಿಕ ಗೊಬ್ಬರ, ಕೀಟನಾಶಕ ಹೆಚ್ಚು ಬಳಕೆ ಮಾಡಬಾರದು. ಸಾವಯವ ಕೃಷಿಗೆ ಆದ್ಯತೆ ಸಿಗಬೇಕು. ಎಲ್ಲರೂ ಅದರತ್ತ ವಾಲಬೇಕು. ನಾವೂ ಪ್ರೋತ್ಸಾಹ ನೀಡುತ್ತಿದ್ದೇವೆ. ರೈತರೂ ಕೈ ಜೋಡಿಸಿ. ನೀರಿನ ರಕ್ಷಣೆ, ಹಾಲು, ಮೊಟ್ಟೆ, ಮಾಂಸ ಉತ್ಪಾದನೆಯೂ ಸಾವಯವ ಪದ್ಧತಿಯಲ್ಲಿ ಆಗಬೇಕಿದೆ. ಇದಕ್ಕೆ ಜನರ ಸಹಕಾರ ಅಗತ್ಯ ಎಂದು ಮನವಿ ಮಾಡಿದರು.
ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ, ಕೃಷಿ ತಂತ್ರಜ್ಞರ ಸಂಸ್ಥೆ ಉಪಾಧ್ಯಕ್ಷ ವಿ.ಕೆ.ಕಮತರ ಮಾತನಾಡಿದರು. ಡಾ.ಬದರಿ ಪ್ರಸಾದ ಪಿ.ಆರ್., ಡಾ.ಬಣಕಾರ ಪಿ.ಎಸ್. ಉಪನ್ಯಾಸ ನೀಡಿದರು. ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು.
ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಪಿ.ಎಂ.ಮಲ್ಲಯ್ಯ, ಮೀನುಗಾರಿಕೆ ಉಪನಿರ್ದೇಶಕ ಶ್ರೀನಿವಾಸ ಕುಲಕರ್ಣಿ, ಕೃಷಿ ವಿಜ್ಞಾನಿ ಡಾ.ಎಂ.ವಿ.ರವಿ, ಉಪಕೃಷಿ ನಿರ್ದೇಶಕ ಎಲ್.ಸಿದ್ದೇಶ್ವರ ಇತರರಿದ್ದರು.