

ಕೊಪ್ಪಳ: ಯೂರಿಯಾ ಗೊಬ್ಬರ ಸಮಸ್ಯೆ ಮತ್ತೆ ಮುಂದುವರೆದಿದ್ದು ಶುಕ್ರವಾರ ನಗರದ ಟಿಎಪಿಸಿಎಂಎಸ್ ಬಳಿ ರೈತರು ದಿಢೀರ್ ಪ್ರತಿಭಟನೆ ನಡೆಸಿದರು. ಸ್ವತ@ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಸ್ಥಳಕ್ಕಾಗಮಿಸಿ ರಸಗೊಬ್ಬರ ವಿತರಣೆಗೆ ಕ್ರಮ ಕೈಗೊಂಡರು.
ಕಳೆದ ಮೂರ್ನಾಲ್ಕು ದಿನದಿಂದ ಮಳೆ ಆಗುತ್ತಿದೆ. ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಿದೆ. ತಾಲೂಕುವಾರು ಸೊಸೈಟಿ ಹಾಗೂ ಖಾಸಗಿ ಅಂಗಡಿಗಳಿಗೆ ಬೇಡಿಕೆಗೆ ತಕ್ಕಂತೆ ರಸಗೊಬ್ಬರ ಪೂರೈಸಲಾಗುತ್ತಿದೆ. ಆದರೂ ಗ್ರಾಮೀಣ ಭಾಗದಲ್ಲಿ ಯೂರಿಯಾ ಕೊರತೆ ಕಂಡುಬರುತ್ತಿದೆ. ಬೆಳಗ್ಗೆಯೇ ಬಂದರೂ 10 ಗಂಟೆಯಾದರೂ ಗೊಬ್ಬರ ಬಂದಿರಲಿಲ್ಲ. ಇದರಿಂದ ಆಕ್ರೋಶಗೊಂಡ ರೈತರು ನಗರದ ಬಸವೇಶ್ವರ ವೃತ್ತ ಬಳಿ ರಸ್ತೆಗಿಳಿದು ದೀಢಿರ್ ಪ್ರತಿಭಟನೆ ನಡೆಸಿದರು. ಇದರಿಂದ ಕೆಲ ಕಾಲ ಟ್ರಾಫಿಕ್ ಉಂಟಾಯಿತು.
ನಗರಠಾಣೆ ಪಿಐ ಕೆ.ಜಯಪ್ರಕಾಶ್ ಸ್ಥಳಕ್ಕಾಗಮಿಸಿ ರೈತರ ಮನವೊಲಿಸಲು ಮುಂದಾದರು. ಪೊಲೀಸ್ ಸಿಬ್ಬಂದಿ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದರು. ವಿಷಯ ತಿಳಿದು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಸ್ಥಳಕ್ಕೆ ಬಂದರು. ಅಧಿಕಾರಿಗಳಿಗೆ ಸೂಚಿಸಿ ಗೊಬ್ಬರ ತರಿಸುವ ಕೆಲಸ ಮಾಡಿದರು. ಸರತಿ ನಿಂತಿದ್ದವರಲ್ಲಿ ಕೆಲ ಶಾಲಾ ಮಕ್ಕಳಿದ್ದರು. ಅವರನ್ನು ಕಂಡು ವಿಚಾರಿಸಿದರು. ಶಾಲೆ ಬಿಟ್ಟು ಗೊಬ್ಬರ ಕೊಳ್ಳಲು ಯಾಕೆ ಬಂದಿದ್ದೀರಿ ಎಂದು ಪ್ರಶ್ನಿಸಿದರು. ಶಾಲೆ ಬಿಟ್ಟು ಬರುವಂತಿಲ್ಲವೆಂದು ತಿಳಿ ಹೇಳಿದರು.
ಆಧಾರ್ ಕಾರ್ಡ್ ನೋಡಿ ಗೊಬ್ಬರ ನೀಡಲಾಗುತ್ತಿದೆ. ಇದೇ ಕಾರಣಕ್ಕೆ ಹಲವರು ಆಧಾರ್ ಹಿಡಿದು ಬಂದಿದ್ದರು. ಅನುಮಾನ ಬಂದು ಕೆಲವರನ್ನು ಪರಿಶೀಲಿಸಿದಾಗ ಜಮೀನು ಇಲ್ಲದವರು, ಮಕ್ಕಳು, ಹಮಾಲರು ಆಧಾರ್ ಕಾರ್ಡ್ ತೋರಿಸಿ ಗೊಬ್ಬರ ಪಡೆಯಲು ಬಂದಿದ್ದರು. ಕೆಲ ಹಮಾಲರು ಗೊಬ್ಬರ ಪಡೆದು ಹೆಚ್ಚಿನ ದರಕ್ಕೆ ಮಾರಿಕೊಳ್ಳುತ್ತಿರುವ ಆರೋಪ ಕೇಳಿ ಬಂದವು. ಈಬಗ್ಗೆ ಸೂಕ್ತ ತನಿಖೆ ನಡೆಸುವುದಾಗಿ ಡಿಸಿ ಭರವಸೆ ನೀಡಿದರು. ಗೊಬ್ಬರ ಕಂಪನಿಯವರಿಗೆ ಮಾತನಾಡಿ ಬೇಡಿಕೆಯಷ್ಟು ಗೊಬ್ಬರ ನೀಡುವಂತೆ ತಾಕೀತು ಮಾಡಿದರು.
ಎಸಿ ಕ್ಯಾ.ಮಹೇಶ ಮಾಲಗಿತ್ತಿ, ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್., ಉಪ ಕೃಷಿ ನಿರ್ದೇಶಕ ಸಿದ್ದೇಶ ಎಲ್. ಇತರರಿದ್ದರು.