ಒಣಗುತ್ತಿರುವ ಮೆಕ್ಕೆಜೋಳ, ಕಳಪೆ ಬೀಜವೆಂದು ರೈತರ ಆರೋಪ

district koppal fertilizer issue dc suresh itnal visit bjp leaders strike
Published on

ಕೊಪ್ಪಳ: ಜಿಲ್ಲೆಯಲ್ಲಿ ಒಂದೆಡೆ ರಸಗೊಬ್ಬರ ಕೊರತೆ ಆದರೆ, ಮತ್ತೊಂದೆಡೆ ನಕಲಿ ಬಿತ್ತನೆ ಬೀಜ ಪೂರೈಕೆ ಆರೋಪ ಕೇಳಿಬರುತ್ತಿವೆ. ಇತ್ತೀಚೆಗೆ ಮುದ್ದಾಬಳ್ಳಿ ಗ್ರಾಮದಲ್ಲಿ ಮೆಕ್ಕೆಜೋಳ ಬೀಜ ಕಳಪೆಯಾಗಿದೆ ಎಂದು ರೈತರು ಆರೋಪಿಸಿದ್ದರು. ಸದ್ಯ ತಾಳಕನಕಾಪುರ, ಕಲಕೇರಾ ಗ್ರಾಮದಲ್ಲೂ ಮೆಕ್ಕೆಜೋಳ ಒಣಗುತ್ತಿದ್ದು ಅನ್ನದಾತರು ಸಂಕಷ್ಟಕ್ಕೆ ಈಡಾಗಿದ್ದಾರೆ.

ಕಿನ್ನಾಳ ಗ್ರಾಮದ ಅಂಗಡಿಯಲ್ಲಿ ತಾಳಕನಕಾಪುರ ಹಾಗೂ ಕಲಕೇರಾ ಗ್ರಾಮದ ನಾಲ್ವರು ರೈತರು ಮೆಕ್ಕೆಜೋಳ ಬಿತ್ತನೆ ಬೀಜ ಖರೀದಿಸಿದ್ದಾರೆ. ಮೂರು ತಿಂಗಳು ಕಳೆದಿದ್ದು, ಏಕಾಏಕಿ ಬೆಳೆ ಒಣಗುತ್ತಿದೆ. ನೀರು, ಗೊಬ್ಬರ ನಿಯಮಿತವಾಗಿ ನೀಡಿದರೂ ಒಣಗುತ್ತಿದೆ. ರೈತರಾದ ಪರಮೇಶ ಮೂಗಿನ, ಶರಣಪ್ಪ ಕುರಿ ಹಾಗೂ ಇನ್ನಿಬ್ಬರು ಕೃಷಿಕರ 11 ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತಿದ್ದಾರೆ. ಒಟ್ಟು 196 ಕೆಜಿ ಬೀಜ ಖರೀದಿಸಿದ್ದು ಬೆಳೆ ಒಣಗುತ್ತಿದ್ದು, ಅನ್ನದಾತರು ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ಬೀಜ ಪೂರೈಸಿದ ಅಂಗಡಿಕಾರರು ಹಾಗೂ ಏಜೆಂಟ್​ಗಳು ಗುರುವಾರ ಜಮೀನಿಗೆ ಭೇಟಿ ನೀಡಿ ವೀಸಿದ್ದಾರೆ. ಕಂಪನಿ ಅಧಿಕಾರಿಗಳನ್ನು ಕರೆಸಿ ಪರಿಶೀಲಿಸುವುದಾಗಿ ತಿಳಿಸಿದ್ದಾರೆ.

ವಿವಿಧೆಡೆ ಡಿಸಿ ಭೇಟಿ

ರಸಗೊಬ್ಬರ ಸಮಸ್ಯೆ ಬಿಗಡಾಯಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಸ್ವತ@ ವಿವಿಧ ಸೊಸೈಟಿ ಹಾಗೂ ರಸಗೊಬ್ಬರ ಅಂಗಡಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ಗುರುವಾರ ಕೊಪ್ಪಳ ತಾಲೂಕಿನ ಬಿಸರಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ರೈತರು 25 ಟನ್​ ಯೂರಿಯಾ ಬೇಡಿಕೆ ಇಟ್ಟರು. ಸದ್ಯ 10 ಟನ್​ ಬಂದಿದ್ದು ಹಂಚಿಕೆ ಮಾಡಿ. ಬಾಕಿ ಒಂದೆರಡು ದಿನದಲ್ಲಿ ಬರಲಿದೆ ಎಂದು ತಿಳಿಸಿದರು. ರೈತರು ಒಟ್ಟಿಗೆ 25 ಟನ್​ ನೀಡುವಂತೆ ಬೇಡಿಕೆ ಇಟ್ಟರು. ಅದರಂತೆ ಗೊಬ್ಬರ ಪೂರೈಸಲು ಡಿಸಿ ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.

ಕೊರತೆ ನೀಗಿಸಲು ಮನವಿ

ಬಿಜೆಪಿ ನಿಯೋಗ ಗುರುವಾರ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಭೇಟಿ ಮಾಡಿ ರಸಗೊಬ್ಬರ ಕೊರತೆ ನೀಗಿಸುವಂತೆ ಮನವಿ ಸಲ್ಲಿಸಿದರು. ರೈತರಿಗೆ ಸಮರ್ಪಕವಾಗಿ ಯೂರಿಯಾ ಸಿಗುತ್ತಿಲ್ಲ. ಸೊಸೈಟಿಗಳಿಗೆ ಬೇಡಿಕೆ ತಕ್ಕಂತೆ ಪೂರೈಸಿ. ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು. ವಿಪಕ್ಷ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್​, ಶಾಸಕ ಗಾಲಿ ಜನಾರ್ದನರೆಡ್ಡಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಜಿಲ್ಲಾಧ್ಯಕ್ಷ ಬಸವರಾಜ ದಢೇಸುಗೂರು, ಮಾಜಿ ಶಾಸಕ ಪರಣ್ಣ ಮುನವಳ್ಳಿ, ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್​, ಸುನಿಲ್​ ಹೆಸರೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net