ಕೊಪ್ಪಳ: ಕಲ್ಲಂಗಡಿ ಬೆಳೆಗಾರರಿಗೆ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ವಿಜ್ಞಾನಿಗಳು ಸಲಹೆ ನೀಡಿದ್ದು, ರಕ್ಷಣಾ ಕ್ರಮ ಅಳವಡಿಸಿಕೊಂಡು ಉತ್ತಮ ಇಳುವರಿ ಹಾಗೂ ಲಾಭ ಪಡೆದುಕೊಳ್ಳಲು ತಿಳಿಸಿದ್ದಾರೆ.
ಥ್ರಿಪ್ಸ್ ನುಸಿಯನ್ನು ಆರಂಭ ಹಂತದಿಂದಲೇ ನಿಯಂತ್ರಿಸಬೇಕು. ಕಸ ರಹಿತ ತೋಟ ಕೀಟಗಳನ್ನು ಹತೋಟಿ ಮಾಡುತ್ತದೆ. ಹೊಲದ ಸುತ್ತಲೂ 1 ತಿಂಗಳ ಮೊದಲೇ ಮೆಕ್ಕೆ ಜೋಳ ಅಥವಾ ಸಜ್ಜೆ ಬೀಜಗಳನ್ನು 4 ಸಾಲು ಬಿತ್ತನೆ ಮಾಡಿ. ಎರಡು ವರ್ಷಗಳ ನಂತರ ಬೆಳೆ ಪರಿವರ್ತನೆ ಮಾಡಬೇಕು. ದ್ವಿದಳ ಧಾನ್ಯಗಳನ್ನು ಬೆಳೆಯುವುದು ಸೂಕ್ತ. ಕೀಟ ನಾಶಕಗಳನ್ನು ಬಳಸುವಾಗ ಬಳ್ಳಿಗಳ ತುದಿಗಳ ಮೇಲೆ ಸಿಂಪಡಿಸಬೇಕು. 2& 3 ಬಾರಿ ಬಳ್ಳಿಯ ತುದಿಗಳನ್ನು ಅಂತರ ವ್ಯಾಪಿ ಕೀಟ ನಾಶಕಗಳಲ್ಲಿ ಅದ್ದಿ ತೆಗೆಯಬೇಕು.
ಎಕರೆಗೆ 4&6 ಹಳದಿ ಮತ್ತು ನೀಲಿ ಬಣ್ಣದ ಅಂಟು ಕಾರ್ಡುಗಳನ್ನು ಬಳಸಬೇಕು. ಲಘು ಪೋಷಕಾಂಶಗಳಾದ ಬೋರಾನ್ ಮತ್ತು ಕ್ಯಾಲ್ಸಿಯಂನ್ನು ತಜ್ಞರ ಸಲಹೆಯಂತೆ ಬಳಸಿ. ಹೂ, ಹಣ್ಣು ಬಿಡುವ ಹಂತ, ಹಣ್ಣು ಬಲಿಯುವ ಹಂತದಲ್ಲಿ ಮಣ್ಣನ್ನು ಆದರಿಸಿ ನೀರು ಕೊಡಬೇಕು. ಬಿತ್ತನೆ, ನಾಟಿ ಮಾಡಿದ 15 ದಿನಗಳ ನಂತರ ನೀರಿನಲ್ಲಿ ಕರಗುವ ಗೊಬ್ಬರಗಳನ್ನು ಸಿಂಪಡಿಸುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದು.
ಪ್ರತಿ ಎಕರೆಗೆ 1&2 ಜೇನು ಪೆಟ್ಟಿಗೆಗಳನ್ನು ಇಡುವುದರಿಂದ ಉತ್ತಮ ಇಳುವರಿ ಪಡೆಯಬಹುದು. ಪ್ರತಿ ಬಳ್ಳಿಗೆ 2 ಆರೋಗ್ಯಯುತ ಕಾಯಿಗಳನ್ನು ಬಿಟ್ಟು ಉಳಿದವುಗಳನ್ನು ಕತ್ತರಿಸಬೇಕು. ಕಾಯಿಗಳು ನಿಂಬೆಹಣ್ಣಿನ ಗಾತ್ರದಲ್ಲಿದ್ದಾಗ ಜಿಬ್ಬರ್ಲಿಕ್ ಆಮ್ಲ 20 ಪಿ.ಪಿ.ಎಂ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಮಾಹಿತಿಗಾಗಿ ಕೊಪ್ಪಳ ಕೃಷಿ ವಿಸ್ತರಣಾ ಕೇಂದ್ರದ ವಿಸ್ತರಣಾ ಮುಂದಾಳು ಡಾ.ಎಂ.ವಿ.ರವಿ ಮೊ:9480247745 ಮತ್ತು ಸಹಾಯಕ ಪ್ರಾಧ್ಯಾಪಕ ವಾಮನಮೂರ್ತಿ ಮೊ:8217696837 ಸಂಪರ್ಕಿಸಬಹುದು.