ರೈತರಿಗಾಗಿ ನನ್ನ ಮೇಲೆ ಕೇಸ್ ಬಿದ್ದರೂ ಹೋರಾಡುವೆ : ರೆಡ್ಡಿ

District Koppal farmers protest MLA Janardhana reddy visit water problem
farmers protest MLA Janardhana reddy visit water problem
ಕೊಪ್ಪಳದಲ್ಲಿ ಗುರುವಾರ ಶಾಸಕ ಗಾಲಿ ಜನಾರ್ದನ ರೆಡ್ಡಿ ರೈತರನ್ನು ಉದ್ದೇಶಿಸಿ ಮಾತನಾಡಿದರು. ಮಾಜಿ ಎಂಎಲ್ಸಿ ಕರಿಯಣ್ಣ ಸಂಗಟಿ, ರೈತ ಮುಖಂಡರಾದ ಜನಾರ್ದನ ಹುಲಿಗಿ, ವಿಶ್ವನಾಥ ರಾಜು ಇತರರಿದ್ದರು.
Published on

ಕೊಪ್ಪಳ: ವಿಜಯನಗರ ಕಾಲುವೆಗಳಿಗೆ ನೀರು ಕೇಳುವುದು ರೈತರ ಹಕ್ಕು. ಸರ್ಕಾರ ತಕ್ಷಣ ಬಿಡಬೇಕು. ಇಲ್ಲದಿದ್ದರೆ ನಿಮ್ಮೊಂದಿಗೆ ನಾನು ಹೋರಾಟದಲ್ಲಿ ಭಾಗಿಯಾಗುವೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು.

ತುಂಗಭದ್ರಾ ಎಡದಂಡೆ ವಿಜಯನಗರ ಕಾಲುವೆಗಳಿಗೆ ನೀರು ಬಿಡುಗಡೆಗೆ ಆಗ್ರಹಿಸಿ ನಗರದ ಡಿಸಿ ಕಚೇರಿ ಮುಂದೆ ರೈತರು ಹಮ್ಮಿಕೊಂಡಿರುವ ಧರಣಿ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಮಾತನಾಡಿದರು.

ಬಚಾವತ್​ ಆಯೋಗ ತೀರ್ಪಿನಂತೆ ವಿಜಯನಗರ ಕಾಲುವೆಗಳಿಗೆ ನೀರು ಬಿಡಲೇಬೇಕು. ಇದು ನಿಮ್ಮ ಮನವಿ ಅಲ್ಲ. ಹಕ್ಕು. ಆದರೆ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ. ನೀರಾವರಿ ಸಲಹಾ ಸಮಿತಿ ಅಧ್ಯಕ್ಷ, ಸಚಿವ ಶಿವರಾಜ ತಂಗಡಗಿ ಜ.10ರಿಂದ ನೀರು ಬಿಡಿಸುವುದಾಗಿ ಭರವಸೆ ನೀಡಿದ್ದರು. ನಾನು ಜ.4ರಂದು ಬಿಟ್ಟರೆ ಕೊನೇ ಭಾಗದ ರೈತರಿಗೆ ತಲುಪಲು ಅನುಕೂಲ ಆಗಲಿದೆ ಎಂದು ವಾದಿಸಿದ್ದೆ. ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಅವರೊಂದಿಗೆ ಚರ್ಚಿಸಿ ನೀರು ಬಿಡಿಸುವುದಾಗಿ ಹೇಳಿ ಸುಮ್ಮನಾಗಿದ್ದಾರೆ ಎಂದು ಆರೋಪಿಸಿದರು.

ನಾನು ನಿಮ್ಮೊಂದಿಗೆ ಇರುವೆ. ಸಂಕ್ರಾಂತಿವರೆಗೆ ಕಾದು ನೋಡೋಣ. ಇಲ್ಲದಿದ್ದರೆ ನಾನು ನಿಮ್ಮೊಡನೆ ಪ್ರತಿಭಟನೆಯಲ್ಲಿ ಭಾಗಿಯಾಗುವೆ. ವೈಯಕ್ತಿಕ ಹಾಗೂ ರಾಜಕೀಯ ಕಾರಣಕ್ಕಾಗಿ ಈಗಾಗಲೇ ನನ್ನ ವಿರುದ್ಧ ಹಲವು ಪ್ರಕರಣ ದಾಖಲಾಗಿವೆ. ರೈತಪರ ಹೋರಾಟಕ್ಕಾಗಿ ಇನ್ನು 10 ಕೇಸ್​ ಬಿದ್ದರೂ ಹೆದರುವುದಿಲ್ಲ ಎಂದರು. ಮಾಜಿ ಎಂಎಲ್ಸಿ ಕರಿಯಣ್ಣ ಸಂಗಟಿ, ರೈತ ಮುಖಂಡರಾದ ಜನಾರ್ದನ ಹುಲಿಗಿ, ವಿಶ್ವನಾಥ ರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net