

ಕೊಪ್ಪಳ: ತಾಲೂಕಿನ ಕುಣಿಕೇರಿ ತಾಂಡಾ ಸಮೀಪದ ಖರೀದಿ ಮಾಡಿದ್ದ ಭೂಮಿ ದಶಕ ಕಳೆದರೂ ಬಳಕೆ ಮಾಡದ ಎಕ್ಸ್ ಇಂಡಿಯಾ ಕಾರ್ಖಾನೆ ನಡೆ ಖಂಡಿಸಿ ರೈತರು ಗುರುವಾರ ದಿಢೀರ್ ಪ್ರತಿಭಟನೆ ನಡೆಸಿದರು.
ಕಂಪನಿ 10 ವರ್ಷದ ಹಿಂದೆ ನೂರಾರು ರೈತರ ಭೂಮಿ ಖರೀದಿಸಿದೆ. ಆದರೆ ಬಳಕೆ ಮಾಡಿಕೊಂಡಿಲ್ಲ. ಭೂಮಿ ಕಳೆದುಕೊಂಡವರಿಗೂ ಕೆಲಸ ನೀಡಿಲ್ಲ. ಈವರೆಗೆ ಭೂಮಿ ಉಳುಮೆ ಮಾಡಿಕೊಂಡು ಬರುತ್ತಿದ್ದೇವೆ. ಇದೀಗ ಏಕಾಏಕಿ ಭೂಮಿ ವಶಕ್ಕೆ ಬಂದಿದ್ದಾರೆ. ಈಗ ಏಕಾಏಕಿ ಬಂದು ಬೇಲಿ ಹಾಕುತ್ತಿದ್ದಾರೆಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಭೂಮಿಗೆ ಬೇಲಿ ಹಾಕುವುದನ್ನು ತಡೆದ ಕುಣಿಕೇರಿ ತಾಂಡಾ, ಕುಣಿಕೇರಿ, ಹಿರೆಬಗನಾಳ, ಚಿಕ್ಕಬಗನಾಳ ಗ್ರಾಮಸ್ಥರು ನಾವು ಯಾವುದೇ ಕಾರಣಕ್ಕೆ ಭೂಮಿ ಬಿಟ್ಟುಕೊಡುವುದಿಲ್ಲ ಎಂದು ಪಟ್ಟು ಹಿಡಿದರು.
ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಗಲಾಟೆ ನಡೆಯದಂತೆ ತಡೆದರು. ಭೂಮಿ ಖರೀದಿಸುವಾಗ ಬರೆದುಕೊಟ್ಟ ಮುಚ್ಚಳಿಕೆ ಪತ್ರ ಪ್ರಕಾರ ಭೂಮಿ ಕಳೆದುಕೊಂಡವರಿಗೆ ಕೆಲಸ ನೀಡಬೇಕು. ಕಾರ್ಖಾನೆ ಆರಂಭಿಸಿ ಉದ್ಯೋಗ ಕೊಡಬೇಕು. ಅದು ಬಿಟ್ಟು ಬೇಲಿ ಹಾಕಿ ಸುಮ್ಮನೆ ಕಬ್ಜ ಮಾಡಿಕೊಳ್ಳಲು ಬಿಡುವುದಿಲ್ಲವೆಂದು ರೈತರು ಪಟ್ಟು ಹಿಡಿದರು.