

ಕೊಪ್ಪಳ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಸಂಯುಕ್ತ ಹೋರಾಟ ಕರ್ನಾಟಕ ಜಿಲ್ಲಾ ಪದಾಧಿಕಾರಿಗಳು ಮಂಗಳವಾರ ನಗರದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕೇಂದ್ರ ರೈತ, ಕಾರ್ಮಿಕ, ವಿದ್ಯಾರ್ಥಿ, ಯುವಜನ ವಿರೋಧಿ ಕಾಯ್ದೆಗಳನ್ನು ಜಾರಿ ಮಾಡುತ್ತಿದೆ. ಕಾಪೋರ್ರೇಟ್ ಪರವಾದ ನೀತಿ ರೂಪಿಸುತ್ತಿದೆ. ಇದನ್ನು ಖಂಡಿಸಿ ಸಂಯುಕ್ತ ಹೋರಾಟ ಕರ್ನಾಟಕ ನಿರಂತರ ಹೋರಾಟ ಮಾಡುತ್ತಿದೆ. ರೈತ ವಿರೋಧಿ ನೀತಿ ಜಾರಿ ಮಾಡಿದ್ದನ್ನು ಖಂಡಿಸಿದಾಗ ಕಾಂಗ್ರೆಸ್ ನಮ್ಮ ಹೋರಾಟ ಪರವಾಗಿ ಮಾತನಾಡಿದೆ. ಅಧಿಕಾರಕ್ಕೆ ಬಂದರೆ ತಕ್ಷಣ ಅವುಗಳನ್ನು ವಾಪಸ್ ಪಡೆವ ಭರವಸೆ ನೀಡಿತ್ತು. ಆದರೆ, ಈವರೆಗೆ ರದ್ದುಪಡಿಸಿಲ್ಲ. ಬಿಜೆಪಿ ಹಾದಿಯಲ್ಲಿಯೇ ರಾಜ್ಯ ಸರ್ಕಾರ ಸಾಗುತ್ತಿದೆ ಎಂದು ಆರೋಪಿಸಿದರು.
ಭೂಸುಧಾರಣೆ, ಎಪಿಎಂಸಿ, ಜಾನುವಾರು ಹತ್ಯೆ, ಮತಾಂತರ ನಿಷೇಧ, ವಿದ್ಯುತ್ ಖಾಸಗೀಕರಣ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯಬೇಕು. ಕೊಟ್ಟ ಮಾತಿನಂತೆ ರಾಜ್ಯ ಸರ್ಕಾರ ನಡೆದುಕೊಳ್ಳಬೇಕು. ಬೆಂಬಲ ಬೆಲೆ ಕಾನೂನು ಜಾರಿ ಮಾಡಿ. ರೈತರ ಸಾಲ ಮನ್ನಾ ಮಾಡಿ. ಭೂರಹಿತರಿಗೆ ಭೂಮಿ ನೀಡಿ. ರೈತ ವಿರೋಧಿ ನೀತಿ ಕೈ ಬಿಡಬೇಕು. ಕಾರ್ಮಿಕ, ಯುವಜನ ಪರ ಕಾನೂನುಗಳನ್ನು ಜಾರಿ ಮಾಡಬೇಕೆಂದು ಒತ್ತಾಯಿಸಿದರು.
ಹೋರಾಟಗಾರರಾದ ಅಲ್ಲಮಪ್ರಭು ಬೆಟ್ಟದೂರು, ನಜೀರಸಾಬ್ ಮೂಲಿಮನಿ, ಕೆ.ಬಿ.ಗೋನಾಳ, ಶರಣು ಗಡ್ಡಿ, ಮುದುಕಪ್ಪ ಹೊಸ್ಮನಿ, ಬಸವರಾಜ್ ನರೇಗಲ್, ಹನುಮಂತಪ್ಪ ಹುಲಿಹೈದರ್, ಗವಿಸಿದ್ದಪ್ಪ, ಮಲ್ಲಿಕಾರ್ಜುನ ಗೌಡ, ಸಂಗಪ್ಪ, ಈರಪ್ಪ, ದೊಡ್ಡಪ್ಪ,ದ್ಯಾಮವ್ವ, ರೇಣುಕಮ್ಮ ರಾಮವ್ವ, ಮಂಜುನಾಥ್ ಸಂಗನಗೌಡ, ಯಲ್ಲಪ್ಪ ಇತರರಿದ್ದರು.