ಕೊಪ್ಪಳ: ನೇತ್ರದಾನ ಪಾಕ ಅಂಗವಾಗಿ ಕೊಪ್ಪಳದಲ್ಲಿ ಸೆ.8ರಂದು ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಗವಿಮಠದ ಆವರಣದಲ್ಲಿ ಗವಿಶ್ರೀಗಳು ಜಾಥಾಕ್ಕೆ ಚಾಲನೆ ನೀಡುವರು ಎಂದು ಎಂ.ಎಂ.ಜೋಶಿ ನೇತ್ರತಜ್ಞ ಡಾ.ವಾಗೀಶ್ ತೆಗ್ಗಿನಕೇರಿಮಠ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಆ.25ರಿಂದ ಸೆ.8ವರೆಗೆ ಪಾಕ ಹಮ್ಮಿಕೊಳ್ಳಲಾಗಿದೆ. ನೇತ್ರದಾನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಮುಖ್ಯ ಉದ್ದೇಶ. ಕೊಪ್ಪಳದಲ್ಲೂ ಜಾಥಾ ಮೂಲಕ ಅರಿವು ಮೂಡಿಸಲಾಗುತ್ತಿದೆ. ಪ್ರತಿ ವರ್ಷ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ. ಸೆ.8ರಂದು ಬೆಳಗ್ಗೆ 8 ಗಂಟೆಗೆ ಗವಿಶ್ರೀಗಳು ಜಾಥಾಕ್ಕೆ ಚಾಲನೆ ನೀಡುವರು. ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿ, ಎಂ.ಎಂ.ಜೋಶಿ ನೇತ್ರವಿಜ್ಞಾನ ಸಂಸ್ಥೆ ನಿರ್ದೇಶಕ ಡಾ.ಶ್ರೀನಿವಾಸ ಎಂ.ಜೋಶಿ, ಎಸ್ಜಿಎಂ ನೇತ್ರಭಂಡಾರ ನಿರ್ದೇಶಕ ಡಾ.ಅನಿಕೆತ್, ಸಿಇಒ ಕುತ್ಬುದ್ದಿನ್ ಮುಲ್ಲಾ, ಸ್ವಯಂ ಸೇವಾ ಸಂ, ಆಶಾ ಕಾರ್ಯಕರ್ತರು ಭಾಗಿಯಾಗುವರು ಎಂದರು.
ನೇತ್ರದಾನ ಘೋಷಣೆಗಳೊಂದಿಗೆ ಗವಿಮಠದಿಂದ ಬಸವೇಶ್ವರ ವೃತ್ತ ಮಾರ್ಗವಾಗಿ ಎಂ.ಎಂ.ಜೋಶಿ ಆಸ್ಪತ್ರೆವರೆಗೆ ಜಾಥಾ ಸಾಗಲಿದೆ. ಬಳಿಕ ಗಣ್ಯರು ಅನಿಸಿಕೆ ಹಂಚಿಕೊಳ್ಳುವರು ಎಂದು ಮಾಹಿತಿ ನೀಡಿದರು. ಶಾಖಾ ಮುಖ್ಯಸ್ಥ ವಿಕ್ರಂ ಗುಡಗೇರಿ ಇದ್ದರು.