ಕುಡಿವ ನೀರು ಸಮಸ್ಯೆ ಆಗದಂತೆ ಕ್ರಮವಹಿಸಿ, ಸಚಿವ ಶಿವರಾಜ ತಂಗಡಗಿ ಸೂಚನೆ

district koppal drinking water problem minister shivaraj tangdagi meeting iofficials
Published on

ಕೊಪ್ಪಳ: ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಕುಡಿವ ನೀರು ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆವಹಿಸಿ ಕ್ರಮ ಕೈಗೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶನಿವಾರ ಕುಡಿವ ನೀರು ಕಾಮಗಾರಿಗಳ ಪ್ರಗತಿ ಪರಿಶೀಲಿಸಿ ಮಾತನಾಡಿದರು.

ಸಮಸ್ಯೆ ಕಂಡುಬಂದ ಗ್ರಾಮಕ್ಕೆ ತಾಪಂ ಇಒ ಖುದ್ದಾಗಿ ಭೇಟಿ ನೀಡಿ ಪರಿಹಾರ ಕಲ್ಪಿಸಿ. ಸಮಸ್ಯಾತ್ಮಕ ಗ್ರಾಮಗಳ ಪಟ್ಟಿ ತಯಾರಿಸಿ. ಸಮಸ್ಯೆ ಕಾಣಿಸಿಕೊಂಡಾಗ ಕಲ್ಪಿಸಬೇಕಾದ ಪರಿಹಾರ ಕಾರ್ಯಕ್ಕೂ ಸಿದ್ಧತೆ ಮಾಡಿಕೊಳ್ಳಿ. ಜನರು ಕರೆ ಮಾಡಿದಾಗ ಸ್ವೀಕರಿಸಿ ಸ್ಪಂದಿಸಿ. ಕುಷ್ಟಗಿ, ಕಾರಟಗಿ, ಕನಕಗಿರಿ ತಾಲೂಕುಗಳಲ್ಲಿ ಸಮಸ್ಯೆ ಹೆಚ್ಚು. ಶಾಶ್ವತವಾಗಿ ಕುಡಿವ ನೀರು ಪೂರೈಕೆಗೆ ಬೇಕಾದ ಕ್ರಮಗಳ ಬಗ್ಗೆ ಯೋಜನೆ ಸಿದ್ಧಪಡಿಸಿ. ಪ್ರತಿ ವರ್ಷ ಬೇಸಿಗೆಯಲ್ಲಿ ಸಮಸ್ಯೆ ಕಾಣಿಸುವ ಗ್ರಾಮ, ನಗರ ಪ್ರದೇಶಗಳಲ್ಲಿ ಅಧಿಕಾರಿಗಳ ಸಭೆ ನಡೆಸಿ ಮುನ್ನೆಚ್ಚರಿಕೆವಹಿಸಿ. ಕುಡಿವ ನೀರಿಗೆ ಹಣಕಾಸು ಸಮಸ್ಯೆ ಇಲ್ಲ. ಅಗತ್ಯವಿದ್ದಲ್ಲಿ ತಕ್ಷಣ ಬಿಡುಗಡೆ ಮಾಡಲಾಗುವುದು. ಅನುದಾನ ಕೊರತೆ ನೆಪ ನೀಡಿ ವಿಳಂಬ ಮಾಡುವಂತಿಲ್ಲ. ತಹಸೀಲ್ದಾರ್​ಗಳು, ತಾಪಂ ಇಒ, ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಅಧಿಕಾರಿಗಳು ನಿರಂತರ ಸಭೆ ನಡೆಸಿ ಬೇಸಿಗೆ ನಿಭಾಯಿಸುವಂತೆ ತಾಕೀತು ಮಾಡಿದರು.

ಸಂಸದ ರಾಜಶೇಖರ ಹಿಟ್ನಾಳ, ಡಿಸಿ ನಲಿನ್​ ಅತುಲ್​, ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಡಿಯುಡಿಸಿ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್​, ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್​. ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net