

ಕೊಪ್ಪಳ: ಬೇಸಿಗೆ ಆರಂಭವಾಗಿದ್ದು ಕುಡಿವ ನೀರು ಪೂರೈಕೆಯಲ್ಲಿ ಸಮಸ್ಯೆ ಆಗದಂತೆ ನೋಡಿಕೊಳ್ಳಿ. ಅಶುದ್ಧ ಕುಡಿವ ನೀರಿನ ಮೂಲಗಳನ್ನು ಬಂದ್ ಮಾಡಿ ಎಂದು ತಹಸೀಲ್ದಾರ್ ವಿಠ್ಠಲ್ ಚೌಗಲಾ ಸೂಚಿಸಿದರು.
ನಗರದ ತಾಪಂ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕುಡಿವ ನೀರು ಹಾಗೂ ಮೇವಿನ ಲಭ್ಯತೆ ಕುರಿತ ಅಧಿಕಾರಿಗಳ ಸಭೆ ಉದ್ದೇಶಿಸಿ ಮಾತನಾಡಿದರು.
ಗ್ರಾಮೀಣ ಭಾಗಗಳಲ್ಲಿ ಕುಡಿವ ನೀರಿನ ಸಮಸ್ಯೆ ಆಗುವ ಸಾಧ್ಯತೆ ಇದೆ. ಸಂಬಂಧಿಸಿದ ಅಧಿಕಾರಿಗಳು ಕುಡಿವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಿ. ಕುಡಿವ ನೀರು ಮೂಲಗಳ ನೀರು ಪರೀೆ ಮಾಡಿಸಿ. ಅಶುದ್ಧ ಜಲಮೂಲಗಳನ್ನು ಬಂದ್ ಮಾಡಿ. ಯಾವುದೇ ಕಾರಣಕ್ಕೂ ಪೂರೈಕೆ ಮಾಡಬೇಡಿ. ಜನರಿಗೂ ಬಳಸದಂತೆ ತಿಳಿಸಿ. ಗ್ರಾಪಂ ಮಟ್ಟದಲ್ಲಿ ಪ್ರತಿ ವಾರ ಕುಡಿವ ನೀರು ಪ್ರಗತಿ ಪರಿಶೀಲನೆ ನಡೆಸಿ. ಅನುಪಾಲನಾ ವರದಿ ಸಲ್ಲಿಸಿ. ಎಲ್ಲ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಿ. ನಗರ ಪ್ರದೇಶದಲ್ಲಿ ಹೊಸದಾಗಿ ನಿರ್ಮಿಸಿದ ನೀರಿನ ಮೇಲ್ತೊಟ್ಟಿಗಳಿಗೆ ಸಂಪರ್ಕ ಕಲ್ಪಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ತಾಪಂ ಇಒ ದುಂಡಪ್ಪ ತುರಾದಿ ಮಾತನಾಡಿ, ನೆಲೋಗಿಪುರ ಬಹುಗ್ರಾಮ ಕುಡಿವ ನೀರಿನ ಯೋಜನೆ ಮೂಲಕ ತಾಲೂಕಿನ ಅಳವಂಡಿ, ಬೋಚನಹಳ್ಳಿ, ಕವಲೂರು, ಹಟ್ಟಿ ಗ್ರಾಪಂಗಳ 14 ಗ್ರಾಮಗಳಿಗೆ ಕುಡಿವ ನೀರು ಪೂರೈಸಲಾಗುತ್ತಿದೆ. ಮುಂದಿನ ಒಂದು ವಾರದವರೆಗೆ ನದಿ ನೀರು ಲಭ್ಯವಾಗಲಿದೆ. ಬಳಿಕ ನೀರಿನ ಅಭಾವ ತಲೆದೂರಲಿದೆ. ಹೀಗಾಗಿ ಸರ್ಕಾರಿ ಬೋರ್ವೆಲ್ ಪರಿಶೀಲಿಸಿ. ಖಾಸಗಿ ಬೋರ್ವೆಲ್ ಬಾಡಿಗೆ ಪಡೆಯಲು ಸಿದ್ಧತೆ ಮಾಡಿಕೊಳ್ಳಿ. ಮಾಲೀಕರಿಂದ ಒಪ್ಪಂದ ಮಾಡಿಕೊಳ್ಳಿ ಎಂದು ತಿಳಿಸಿದರು.
ನಗರಸಭೆ ಅಧಿಕಾರಿಗಳು, ಭಾಗ್ಯನಗರ ಪಪಂ, ಗ್ರಾಪಂ ಪಿಡಿಒಗಳು, ಕಂದಾಯ ಅಧಿಕಾರಿಗಳಿದ್ದರು.