ಕೊಪ್ಪಳದಲ್ಲಿ ದೇವರ ದಾಸಿಮಯ್ಯ ಜಯಂತಿ ಆಚರಣೆ

district koppal devara dasimayya jayanthi celebration district administartion
Published on

ಕೊಪ್ಪಳ: ನಮ್ಮದು ಡಾಂಬಿಕ ಭಕ್ತಿಯಾಗಿದ್ದಲ್ಲಿ ನಾವು ಮಾಡುವ ಕೆಲಸ ಅಪೂರ್ಣವಾಗುತ್ತವೆ ಎಂದು ದೇವಾಂಗ ಸಮುದಾಯ ಜಿಲ್ಲಾಧ್ಯಕ್ಷ ಶಿವಶಂಕರಪ್ಪ ಚಿನ್ನಿ ಹೇಳಿದರು.

ಜಿಲ್ಲಾಡಳಿತದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿ ವರ್ಷ ದೇವರ ದಾಸಿಮಯ್ಯ ಜಯಂತಿ ಆಚರಿಸುತ್ತಿರುವುದಕ್ಕೆ ಸರ್ಕಾರಕ್ಕೆ ಧನ್ಯವಾದಗಳು. ದಾಸಿಮಯ್ಯ ಶ್ರೇಷ್ಠ ವಚನಕಾರ. ಅಂಥ ಮಹನೀಯ ನಮ್ಮ ಸಮುದಾಯದಲ್ಲಿ ಹುಟ್ಟಿದ್ದು ನಮ್ಮೆಲ್ಲರ ಪುಣ್ಯ. ಪ್ರತಿ ವರ್ಷ ಶ್ರೀಶೈಲ ಮಲ್ಲಿಕಾರ್ಜುನ ಜಾತ್ರೆ ನಡೆವಾಗ ಅವರ ಶಿಖರಕ್ಕೆ ದೇವರ ದಾಸಿಮಯ್ಯನವರು ಬಂದು ಬಟ್ಟೆ ಸುತ್ತುತ್ತಾರೆ ಎಂಬ ನಂಬಿಕೆ ಇಂದಿಗೂ ಜನರಲ್ಲಿ ಇದೆ. ಅದು ಎಲ್ಲರಿಗೂ ಕಾಣುವದಿಲ್ಲ. ಭಕ್ತಿ ಇದ್ದವರಿಗೆ ಗೋಚರಿಸುವುದಾಗಿ ಪ್ರತಿತಿ ಇದೆ ಎಂದರು.

ದೇವಾಂಗ ಸಮುದಾಯ ನೌಕರರ ಸಂದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ತಿಮ್ಮಾಪುರ ಮಾತನಾಡಿ, ದೇವರ ದಾಸಿಮಯ್ಯ ಅವರು ಯಾದಗಿರಿ ಜಿಲ್ಲೆಯ ಮುದನೂರ ಗ್ರಾಮದಲ್ಲಿ ಜನಿಸಿದರೆಂದು ಇತಿಹಾಸದಿಂದ ತಿಳಿದು ಬರುತ್ತದೆ. ಚಾಲುಕ್ಯ ಅರಸ 2ನೇ ಜಯಸಿಂಹ ಶಾಸನ ಆಧಾರದ ಮೇಲೆ ಅವರ ಇತಿಹಾಸ ತಿಳಿಯುತ್ತದೆ. ಕನ್ನಡ ಸಾಹಿತ್ಯದಲ್ಲಿ ಅವರು ವಚನ ಸಾಹಿತ್ಯದ ಹರಿಕಾರರಾಗಿದ್ದಾರೆ. ಅವರ 164 ವಚನಗಳು ಈವರೆಗೆ ದೊರೆತಿವೆ. ಇನ್ನೂ ಸಂಶೋಧನೆ ಆಗಬೇಕಿದೆ ಎಂದು ಒತ್ತಾಯಿಸಿದರು.

ಎಡಿಸಿ ಸಿದ್ರಾಮೇಶ್ವರ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ದೇವಾಂಗ ಸಮುದಾಯ ಪ್ರಮುಖರಾದ ನಾರಾಯಣಪ್ಪ ಕೊಳ್ಳಿ, ಚಂದ್ರಕಾಂತ ಬೆಟಗೇರಿ, ಪ್ರಹ್ಲಾದ ಅಗಳಿ, ಪಂಪಾಪತಿ ಅರಳಿಕಟ್ಟಿ, ನಾರಾಯಣಪ್ಪ ಹಾಗೂ ಪರಶುರಾಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net