ಕೊಪ್ಪಳ: ರಾಜ್ಯಾದ್ಯಂತ ಶಿಕ್ಷಕರ ದಿನಾಚರಣೆ ಸಂಭ್ರಮ ಮನೆ ಮಾಡಿದರೆ, ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ಶುಕ್ರವಾರ ಶಿಕ್ಷಣ ಇಲಾಖೆಯಿಂದ ಆಚರಣೆ ನಡೆಯಲಿಲ್ಲ. ಪ್ರಶಸ್ತಿಗೆ ಶಿಕ್ಷಕರ ಆಯ್ಕೆ ಗೊಂದಲದ ಗೂಡಾಗಿದ್ದು ಪಟ್ಟಿಯನ್ನ ಪ್ರಕಟಿಸದಿರುವುದು ಶಿಕ್ಷಕರ ವಲಯದಲ್ಲಿ ಅಸಮಾಧಾನ ಮೂಡಿಸಿದೆ.
ಸಾಮಾನ್ಯವಾಗಿ ಪ್ರತಿ ವರ್ಷ ಸೆ.5ರಂದೇ ಶಿಕ್ಷಕರ ದಿನ ಆಚರಿಸಲಾಗಿದೆ. ಸೆ.4ರಂದು ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಪ್ರಕಟಿಸಲಾಗುತ್ತಿತ್ತು. ಈ ಬಾರಿ ರಾಜಕೀಯ ಪೈಪೋಟಿ ಹೆಚ್ಚಿದ್ದು, ಪ್ರಶಸ್ತಿಗೆ ಶಿಕ್ಷಕರ ಆಯ್ಕೆ ಮಾಡುವಲ್ಲಿ ಗೊಂದಲ ಏರ್ಪಟ್ಟಿದೆ. ಯಾರನ್ನು ಆಯ್ಕೆ ಮಾಡಬೇಕು, ಮಾಡಬಾರದೆಂಬ ಬಗ್ಗೆ ಶಿಕ್ಷಕರ ಗುಂಪುಗಳ ನಡುವಿನ ಪೈಪೋಟಿ ರಾಜಕೀಯ ನಾಯಕರವರೆಗೆ ತಲುಪಿದೆ. ಅವರಿಂದಲೂ ಒತ್ತಡ ಹೆಚ್ಚಿದ್ದು, ಆಚರಣೆ ಮುಂದೂಡುವಂತೆ ಮಾಡಿದೆ.
ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ ವಿಭಾಗಗಳಲ್ಲಿ ಆಯಾ ತಾಲೂಕುವಾರು ಶಿಕ್ಷಕರನ್ನು ಆಯ್ಕೆ ಮಾಡಲಾಗುತ್ತದೆ. ಡಿಡಿಪಿಐ ಅಧ್ಯಕ್ಷತೆಯ ಸಮಿತಿಯಲ್ಲಿ ಶಿಕ್ಷಕರ ಸಂದ ಪ್ರತಿನಿಧಿಗಳು, ರಾಜ್ಯಮಟ್ಟದ ಪ್ರಶಸ್ತಿ ಪಡೆದವರು, ಡಯೇಟ್ ಪ್ರತಿನಿಧಿಗಳು ಇರುತ್ತಾರೆ. ಶಿಕ್ಷಕರ ಸಂವು ಪಟ್ಟಿ ಬಿಡುಗಡೆಗೆ ಒತ್ತಾಯಿಸಿದರೂ ಇಲಾಖೆ ಗುಪ್ತತೆ ಕಾಯ್ದುಕೊಂಡಿದೆ. ಸೋಮವಾರ (ಸೆ.6) ಕಾರ್ಯಕ್ರಮ ಹಮ್ಮಿಕೊಂಡಿದ್ದು, ಯಾರಿಗೆ ಪ್ರಶಸ್ತಿ ನೀಡಲಿದೆ ಎಂಬ ಕುತೂಹಲ ಮೂಡಿಸಿದೆ. ಸಂಧಾನ ಸೂತ್ರ ಯಶಸ್ವಿಯಾಗದಿದ್ದರೆ ಶಿಕ್ಷಕರ ವಲದಯಲ್ಲಿ ಅಸಮಾಧಾನ ಭುಗಿಲೇಳಲು ಕಾರಣವಾದರೂ ಅಚ್ಚರಿ ಇಲ್ಲ ಎಂಬಂತಾಗಿದೆ.