ಬಾಲ್ಯವಿವಾಹ ನಡೆದರೆ ಕಠಿಣ ಕ್ರಮ, ಡಿಸಿ ಡಾ.ಸುರೇಶ ಇಟ್ನಾಳ ಸೂಚನೆ

district koppal dc suresh itnal meeting child marriage
Published on

ಕೊಪ್ಪಳ: ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಬಾಲ್ಯವಿವಾಹ, ಬಾಲ ಗರ್ಭಿಣಿ ಪ್ರಕರಣಗಳು ನಡೆಯಬಾರದು. ಜರುಗಿದರೆ ಸಂಬಂಧಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.

ಸಿಎಂ ಇತ್ತೀಚೆಗೆ ನಡೆಸಿದ ಸಭೆಯಲ್ಲಿ ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಬಾಲ್ಯವಿವಾಹ, ಬಾಲ ಗರ್ಭಿಣಿ ಪ್ರಕರಣ ತಡೆಗೆ ವ್ಯಾಪಕ ಪ್ರಚಾರ ಕೈಗೊಳ್ಳಿ. ಗ್ರಾಪಂ ಮಟ್ಟದಲ್ಲಿ ಕಾವಲು ಸಮಿತಿ ಸಭೆ ನಡೆಸಿ. ಪ್ರೌಢಶಾಲೆ, ಕಾಲೇಜು, ಮಹಿಳಾ ಸ್ವ ಸಹಾಯ ಸಂಘ ಸಂಸ್ಥೆಗಳು ಮತ್ತು ಗ್ರಾಮಸ್ಥರನ್ನು ಸೇರಿಸಿ. ಬಾಲ್ಯ ವಿವಾಹ ಕಾನೂನು ಬಾಹಿರ ಎಂಬ ಬಗ್ಗೆ ಅರಿವು ಮೂಡಿಸಿ. ಜಾಗೃತಿ ಜಾಥಾ ನಡೆಸಿ. ಸಮಗ್ರ ಶಿಕ್ಷಣ ಅಭಿಯಾನದಡಿ ಪ್ರೌಢಶಾಲೆಗಳಲ್ಲಿ ಜಾಗೃತಿ ಮೂಡಿಸಲು ಅನುದಾನವಿದೆ. ಕಾನೂನು ಸೇವಾ ಪ್ರಾಧಿಕಾರ ಸಹಯೋದಲ್ಲಿ ಅರಿವು ಕಾರ್ಯಕ್ರಮ ಮಾಡಿ. ತಾಲೂಕು ಮಟ್ಟದಲ್ಲಿ ತಹಸೀಲ್ದಾರ್​ ಹಂತದಲ್ಲಿನ ಸಮಿತಿಗಳು ನಿರಂತರ ಸಭೆ ನಡೆಸಿ ಪ್ರಗತಿ ಪರಿಶೀಲಿಸಿ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಂಜೀವಿನಿ ಎನ್​ಆರ್​ಎಲ್​ಎಂ ಸಂಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗಳು ಶಾಲೆಯಿಂದ ಹೊರಗುಳಿದ ಹೆಣ್ಣು ಮಕ್ಕಳನ್ನು ಪತ್ತೆ ಮಾಡಿ. ಬಾಲ್ಯವಿವಾಹ ಆಗಿದೆಯಾ ಎಂದು ವಿಚಾರಿಸಿ. ಒಂದೊಮ್ಮೆ ಯತ್ನಗಳು ನಡೆದಿದ್ದರೆ ತಡೆಯಿರಿ. ಅಪ್ರಾಪ್ತರ ಮದುವೆ ಅಥವಾ ಬಾಲಗರ್ಭಿಣಿ ಪ್ರಕರಣಗಳು ಕಂಡುಬಂದಲ್ಲಿ ತಕ್ಷಣ ಪ್ರಕರಣ ದಾಖಲಿಸಿ. ನಾವು ಜಾಗೃತರಾದಾರ ಜನರನ್ನು ಎಚ್ಚರಿಸಬಹುದು. ಎಲ್ಲ ದೇವಾಲಯ, ಸಾರ್ವಜನಿಕ ಸ್ಥಳಗಳಲ್ಲಿ ಬಾಲ್ಯವಿವಾಹ ಕಾನೂನು ಬಾಹಿರವೆಂದು ಗೋಡೆ ಬರಹ ಬರೆಸುವಂತೆ ತಾಕೀತು ಮಾಡಿದರು.

ಹಿರಿಯ ಸಿವಿಲ್​ ನ್ಯಾಯಾಧೀಶ ಮಹಾಂತೇಶ ಎಸ್​.ದರಗದ ಮಾತನಾಡಿ, ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧ. ಪೊಲೀಸರು ತಮ್ಮ ವ್ಯಾಪ್ತಿಯಲ್ಲಿ ನಡೆವ ಬಾಲ್ಯವಿವಾಹಗಳ ಬಗ್ಗೆ ಸ್ವಯಂ ದೂರು ದಾಖಲಿಸಿಕೊಂಡು ಕ್ರಮಕೈಗೊಳ್ಳಿ. ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳು ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ. ಶಾಲಾ ಹಂತದಲ್ಲಿ ಹುಡುಗ&ಹುಡುಗಿಯರ ಚಟುವಟಿಕೆಗಳ ಮೇಲೆ ನಿಗಾವಹಿಸಿ. ಸರಿಯಾದ ತಿಳಿವಳಿಕೆ ನೀಡಿ. ಹಾಸ್ಟೆಲ್​ ವಾರ್ಡನ್​ಗಳು ವಸತಿ ನಿಯಲಗಳಲ್ಲಿ ಮಕ್ಕಳ ಬಗ್ಗೆ ಎಚ್ಚರಿಕೆವಹಿಸಬೇಕೆಂದು ನಿರ್ದೇಶಿಸಿದರು.

ಜಿಪಂ ಸಿಇಒ ವರ್ಣಿತ್​ ನೇಗಿ ಮಾತನಾಡಿ, ಪ್ರೌಢಶಾಲಾ ಹಂತದಲ್ಲಿಯೇ ಬಾಲ್ಯವಿವಾಹ, ಬಾಲ ಗರ್ಭಿಣಿ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಹೆಣ್ಣು ಮಗು ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣಳಾದರೆ ಮುಂದಿನ ಶಿಕ್ಷಣ ಸಿಗುತ್ತದೆ. ನಪಾಸಾದರೆ ಮದುವೆ ಮಾಡಿಸುತ್ತಾರೆ. ಶಿಕ್ಷಣಾಧಿಕಾರಿಗಳು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪತ್ತೆ ಮಾಡಿ. ಎಲ್ಲ ಇಲಾಖೆಗಳು ತಮ್ಮ ಪತ್ರ ವ್ಯವಹಾರದಲ್ಲಿ ಬಾಲ್ಯವಿವಾಹ ನಿಷೇಧ ಬಗ್ಗೆ ಜಾಗೃತಿ ಸಂದೇಶ ಹಾಕುವಂತೆ ತಿಳಿಸಿದರು.

ಎಎಸ್ಪಿ ಆರ್​.ಹೇಮಂತ್​ ಕುಮಾರ್​, ಉಪವಿಭಾಗಾಧಿಕಾರಿ ಕ್ಯಾ.ಮಹೇಶ ಮಾಲಗಿತ್ತಿ, ಜಿಪಂ ಉಪ ಕಾರ್ಯದರ್ಶಿ ಟಿ.ಕೃಷ್ಣಮೂರ್ತಿ, ಡಿಯುಡಿಸಿ ಪಿಡಿ ಮಂಜುನಾಥ ಗುಂಡೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಉಪನಿರ್ದೇಶಕ ಪಿ.ವೈ.ಶೆಟ್ಟೆಪ್ಪನವರ, ಡಿಎಚ್​ಒ ಡಾ.ಟಿ.ಲಿಂಗರಾಜು, ಡಿಡಿಪಿಯು ಜಗದೀಶ ಜಿ.ಎಚ್​., ಡಿಡಿಪಿಐ ಸೋಮಶೇಖರಗೌಡ ಪಾಟೀಲ್​, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ, ಯುನಿಸ್​ೆ ಜಿಲ್ಲಾ ಸಂಯೋಜಕ ಹರೀಶ ಜೋಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net