ಅನಧಿಕೃತ ಗೊಬ್ಬರ ಶೇಖರಿಸಿದರೆ ಕ್ರಮ, ಡಿಸಿ ಡಾ.ಸುರೇಶ ಬಿ.ಇಟ್ನಾಳ ಎಚ್ಚರಿಕೆ

district koppal dc suresh itnal jda meeting
Published on

ಕೊಪ್ಪಳ: ಜಿಲ್ಲೆಗೆ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಯೂರಿಯಾ ಗೊಬ್ಬರ ಬಂದಿದೆ. ಯಾರಾದರೂ ಅನಧಿಕೃತವಾಗಿ ಸಂಗ್ರಹಿಸಿ ಕೃತಕ ಅಭಾವ ಸೃಷ್ಟಿಸಿದರೆ ಕಾನೂನು ಕ್ರಮ ಕೈಗೊಂಡು ಪರವಾನಗಿ ರದ್ದುಪಡಿಸುವಂತೆ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಡಿಸಿ ಕಚೇರಿ ವಿಡಿಯೋ ಕಾನ್ಫರೆನ್ಸ್​ ಹಾಲ್​ನಲ್ಲಿ ಶುಕ್ರವಾರ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಸಭೆ ನಡೆಸಿ ಮಾತನಾಡಿದರು.

ಕೃಷಿ ಅಧಿಕಾರಿಗಳು, ಜಾಗೃತದಳ ಅಧಿಕಾರಿಗಳು ಕ್ರಿಯಾಶೀಲರಾಗಿ ಕೆಲಸ ಮಾಡಿ. ಪಿಎಂ ಸಲ್​ ಬೀಮಾ ಯೋಜನೆಯಡಿ ಕಳೆದ ವರ್ಷ 86 ಸಾವಿರ ರೈತರು ನೋಂದಾಯಿಸಿದ್ದಾರೆ. ಈ ಬಾರಿ ಮಳೆ ಕಡಿಮೆಯಾಗಿದ್ದು, ಎಲ್ಲ ರೈತರಿಗೂ ವಿಮೆ ಮಾಡಿಸಿ. ಬೆಳೆ ಸಮೀೆ ಆದಷ್ಟು ಬೇಗನೆ ಮುಗಿಸಿ. ರಸಗೊಬ್ಬರ ಕೊರತೆ ಆಗದಿರಲಿ. ಅನಧಿಕೃತವಾಗಿ ಸಂಗ್ರಹಿಸುವುದು, ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಿ ಎಂದು ತಾಕೀತು ಮಾಡಿದರು.

ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್​. ಮಾತನಾಡಿ, ಕಳೆದ ವರ್ಷ ಈ ಅವಧಿಗೆ 16,445 ಟನ್​ ರಸಗೊಬ್ಬರ ರ್ಖಚಾಗಿದೆ. ಈ ವರ್ಷ ಈವರೆಗೆ 19,799 ಟನ್​ ವಿತರಿಸಲಾಗಿದೆ. 9 ಸಾವಿರ ಟನ್​ ದಾಸ್ತಾನಿದೆ. ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆ ಇಲ್ಲ. ಕಳ್ಳಸಂತೆಯಲ್ಲಿ ಮಾರಾಟ ಮಾಡಿದಲ್ಲಿ ಕೃಷಿ ಜಾಗೃತದಳ ಅಧಿಕಾರಿಗಳಾದ ಸುನಿಲ್​ ಕುಮಾರ್​, ನಾಗರಾಜ ಅವರಿಗೆ ದೂರು ನೀಡಬಹುದು. ಈಗಾಗಲೇ ನಿಯಮ ಉಲ್ಲಂಘಿಸಿದವರ ಪರವಾನಗಿ ರದ್ದುಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಉಪ ಕೃಷಿ ನಿರ್ದೇಶಕ ಎಲ್​.ಸಿದ್ದೇಶ, ಕನಕಗಿರಿ ತಹಸೀಲ್ದಾರ್​ ವಿಶ್ವನಾಥ ಮುರಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net