

ಕೊಪ್ಪಳ: ಈ ಬಾರಿ ಮಳೆ ಆಶಾದಾಯಕವಾಗಿ ಕಾಣಿಸುತ್ತಿಲ್ಲ. ಎಲ್ಲ ರೈತರಿಗೂ ಬೆಳೆ ವಿಮೆ ಮಾಡಿಸುವಂತೆ ತಿಳಿಸಿ ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಕೃಷಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.
ಈವರೆಗೆ ಸರಿಯಾಗಿ ಮಳೆ ಆಗಿಲ್ಲ. ಮುಂದೆಯೂ ಆಗದಿದ್ದರೆ ಕಷ್ಟ. ಹೀಗಾಗಿ ಎಲ್ಲ ರೈತರಿಗೆ ವಿಮೆ ಮಾಡಿಸಿ. ಕಳೆದ ವರ್ಷ ಎಷ್ಟು ಜನ ಮಾಡಿದ್ದಾರೆ. ಅದಕ್ಕಿಂತ ಹೆಚ್ಚಾಗಬೇಕು. ವಿಮೆ ಲಾಭ ಕುರಿತು ಜನರಿಗೆ ಮನವರಿಕೆ ಮಾಡಿ. ಇಳುವರಿ ಪರೀೆಯಲ್ಲಿ ಸಮಸ್ಯೆಗಳಿದ್ದರೆ ಸರಿಪಡಿಸಿ. ಎಲ್ಲ ಅಧಿಕಾರಿಗಳು ನಿಮ್ಮ ಜವಾಬ್ದಾರಿ ಸರಿಯಾಗಿ ನಿಭಾಯಿಸಿ ಎಂದು ತಾಕೀತು ಮಾಡಿದರು.
ಸಾಮಾಜಿಕ ಅರಣ್ಯ ವಿಭಾಗದಿಂದ ಜಿಲ್ಲೆಯಲ್ಲಿ ಒಂದು ಲಕ್ಷ ಗಿಡ ನೆಡಿ. ರಸ್ತೆ ಬದಿ, ವಸತಿ ಶಾಲೆ ಆವರಣಗಳಲ್ಲಿ ಹಚ್ಚಿ. ಶ್ರೀಗಂಧ ಬೆಳೆವ ರೈತರನ್ನು ಪ್ರೋತ್ಸಾಹಿಸಿ. ಬಿತ್ತನೆ ಬೀಜ, ರಸಗೊಬ್ಬರ ಸಮಸ್ಯೆ ಆಗದಂತೆ ಎಚ್ಚರಿಕೆವಹಿಸಿ ಎಂದು ತಿಳಿಸಿದರು. ರೇಷ್ಮೇ, ಹೈನುಗಾರಿಕೆ, ಪಶುಪಾಲನೆ, ಮೀನುಗಾರಿಕೆ ಇಲಾಖೆಗಳ ಪ್ರಗತಿವಿವರ ಪಡೆದರು.
ಬಳಿಕ ಬೆಳೆವಿಮೆ ಭಿತ್ತಿಪತ್ರ ಬಿಡುಗಡೆಗೊಳಿಸಲಾಯಿತು. ಜಿಪಂ ಸಿಇಒ ವರ್ಣಿತ್ ನೇಗಿ, ಎಡಿಸಿ ಸಿದ್ರಾಮೇಶ್ವರ, ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್., ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಉಪ ಅರಣ್ಯ ಸಂರಕ್ಷಣಾಧಿಕಾರಿ ಹುಸೇನ್ ಪೆಂಡಾರಿ ಇತರರಿದ್ದರು.