

ಕೊಪ್ಪಳ: ಜಿಲ್ಲೆಯಲ್ಲಿ ಉದ್ಯಮರಂಗ ಬೆಳೆಯಬೇಕಿದೆ. ನವ ಉದ್ಯಮಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿದ್ದು, ಸದ್ಬಳಕೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಸುರೇಶ ಬಿ. ಇಟ್ನಾಳ ತಿಳಿಸಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಕೈಗಾರಿಕೆ ಇಲಾಖೆಯಿಂದ ಗುರುವಾರ ಹಮ್ಮಿಕೊಂಡಿದ್ದ ಝಡ್.ಇ.ಡಿ-ಲೀನ್ ಯೋಜನೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ 17.15 ಲಕ್ಷ ಜನಸಂಖ್ಯೆ ಇದೆ. 4 ಸಾವಿರ ಜನ ಮಾತ್ರ ಉದ್ಯಮ ನೋಂದಣಿ ಮಾಡಿಕೊಂಡಿದ್ದಾರೆ. ಕಾಯಕವೇ ಕೈಲಾಸ ಎಂಬ ಶ್ರಮ ಸಂಸತಿ ಈ ಭಾಗದಲ್ಲಿದೆ. ಮೈಕ್ರೋ ಸ್ಮಾಲ್ & ಮೀಡಿಯಂ ಎಂಟರ್ ಪ್ರೈಸಸ್ (ಎಂಎಸ್ಎಂಇ) ನಿಂದ ಸಾಮಾನ್ಯ ವರ್ಗದವರಿಗೆ ಶೇ.25 ರಷ್ಟು ಹಾಗೂ ಅಲ್ಪಸಂಖ್ಯಾತರು, ಪಜಾ, ಪಪಂ ಮಹಿಳೆಯರಿಗೆ ಶೇ. 35ರಷ್ಟು ಸಬ್ಸಿಡಿ ಸಾಲ ದೊರೆಯುತ್ತದೆ. ಈ ಬಗ್ಗೆ ಬಹಳ ಜನರಿಗೆ ತಿಳಿದಿಲ್ಲ. ಹೆಚ್ಚಿನ ಪ್ರಚಾರ ಅವಶ್ಯವಿದೆ. ಸೌಲಭ್ಯ ಬಳಸಿಕೊಂಡು ಸಣ್ಣ ಉದ್ಯಮದಾರರು ಆರ್ಥಿಕವಾಗಿ ಸ್ವಾವಲಂಬಿಗಳಾಗಬಹುದು ಎಂದರು.
ಕೊಪ್ಪಳ ಕೃಷಿ, ಉದ್ಯಮಕ್ಕೆ ಪೂರಕವಾಗಿದೆ. ಕೃಷಿ ಸಂಬಂಧಿ ಉದ್ಯಮ ಆರಂಭಿಸಬಹುದು. ಮೇಕ್ ಇನ್ ಇಂಡಿಯಾ ಯೋಜನೆಯಡಿ ಸ್ಥಳಿಯವಾಗಿಯೇ ಉತ್ಪನ್ನ ಉತ್ಪಾದಿಸಬಹುದು. ಇದರಿಂದ ದೇಶದ ಜಿಡಿಪಿ ಬೆಳವಣಿಗೆಗೆ ಅನುಕೂಲವಾಗಲಿದೆ. ಇದೇ ಕಾರಣಕ್ಕೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಮುದ್ರಾ ಯೋಜನೆಯಡಿ ಶಿಶು, ಕಿಶೋರ, ತರುಣ್ ವಿಭಾಗಗಳಲ್ಲಿ ಸಾಲ ದೊರೆಯುತ್ತದೆ. ಅವನ್ನು ಬಳಸಿ ಉದ್ಯಮ ಆರಂಭಿಸಬಹುದೆಂದು ತಿಳಿಸಿದರು.
ಜಂಟಿ ಕೈಗಾರಿಕೆ ನಿರ್ದೇಶಕ ಮನ್ಸೂರ ಮಾತನಾಡಿ, ಎಂಎಸ್ಎಂಇ ಕೇಂದ್ರದ ಯೋಜನೆ. ಉದ್ಯಮ ಕಾರ್ಯಕ್ಷಮತೆ ಹೆಚ್ಚಿಸುವಿಕೆ, ವೇಗಗೊಳಿಸುವುದಕ್ಕಾಗಿ ಅನೇಕ ಯೋಜನೆಗಳಿವೆ. ಎಂಎಸ್ಎಂಇಯಿಂದ ಜಿಡಿಪಿಗೆ ಶೇ.35ರಷ್ಟು, ರಫ್ತಿನಲ್ಲಿ ಶೇ.45ರಷ್ಟು ಪಾಲಿದೆ. ಕೃಷಿ ನಂತರ ಎಂಎಸ್ಎಂಇಯಿಂದ ಹೆಚ್ಚು ಉದ್ಯೋಗ ಸೃಷ್ಟಿಯಾಗಿದೆ. ದೊಡ್ಡ ಬಂಡವಾಳ ಹೂಡಿಕೆಗಿಂತ ಎಂಎಸ್ಎಂಇಗಳಲ್ಲಿ ಶೇ.10ರಷ್ಟು ಉದ್ಯೋಗ ಸೃಷ್ಟಿಯಾಗುತ್ತದೆ. ಇದೇ ಕಾರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಂಎಸ್ಎಂಇ ಉತ್ತೇಜಿಸುತ್ತಿವೆ ಎಂದು ವಿವರಸಿದರು.
ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್., ಕರ್ನಾಟಕ ಸ್ಮಾಲ್ ಸ್ಕೇಲ್ ಇಂಡಸ್ಟ್ರೀಸ್ ಅಸೋಶಿಯನ್ ಕಾಸಿಯಾ ಉಪಾಧ್ಯಕ್ಷ ಲಿಂಗಣ್ಣ ಎಸ್. ಬಿರಾದಾರ, ಕಾಸಿಯಾ ಜಂಟಿ ಕಾರ್ಯದರ್ಶಿ (ನಗರ) ಕೇಶವ ಮೂರ್ತಿ ಆರ್., ಕಾಸಿಯಾ ಜಂಟಿ ಕಾರ್ಯದರ್ಶಿ (ಗ್ರಾಮೀಣ) ದಿನೇಶ್ ಕುಮಾರ, ಕೊಪ್ಪಳ ಜಿಲ್ಲಾ ಕಾಸಿಯಾ ಅಭಿವೃದ್ಧಿ ಸಮಿತಿ, ಪ್ಯಾನಲ್ ಅಧ್ಯೆ ಪುಷ್ಪಲತಾ, ಅಸೋಸಿಯೇಟ್ ಶಿವಕುಮಾರ್ ಇತರರಿದ್ದರು.