

ಕೊಪ್ಪಳ: ಒತ್ತಡ ನಿವಾರಣೆಗೆ ಕ್ರೀಡಾ ಚಟುವಟಿಕೆಯಲ್ಲಿ ಭಾಗಿಯಾಗುವುದು ಅಗತ್ಯ. ಕ್ರೀಡೆಯಿಂದ ದೈಹಿಕ, ಮಾನಸಿಕ ಉಲ್ಲಾಸ ಹೆಚ್ಚಲಿದೆ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಅಭಿಪ್ರಾಯಪಟ್ಟರು.
ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪೊಲೀಸ್ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದು ಸಂತಸ ತಂದಿದೆ. ಕಳೆದ ವರ್ಷವೂ ಭಾಗಿಯಾಗಿದ್ದೆ. ತಂಡವಾಗಿ, ಕ್ರೀಡಾ ಸ್ಫೂರ್ತಿಯಿಂದ ಪಾಲ್ಗೊಳ್ಳಿ. ಸಣ್ಣಪುಟ್ಟ ತಪು$್ಪಗಳ ಕಡೆ ಗಮನ ನೀಡಬೇಡಿ. ಒತ್ತಡ ನಿವಾರಣೆಗೆ ಕ್ರೀಡೆ ಅವಶ್ಯ. ಪೊಲೀಸರು ಹೆಚ್ಚಿನ ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ಕ್ರೀಡೆಯಲ್ಲಿ ಪಾಲ್ಗೊಳ್ಳುವಿಕೆಯಿಂದ ಲವಲವಿಕೆ ಹೆಚ್ಚಲಿದೆ. ಕಳೆದ ಬಾರಿ ಆದ ತಪು$್ಪಗಳು ಮರುಕಳಿಸದಿರಲಿ. ಮೂರು ದಿನ ನಡೆವ ಕ್ರೀಡಾಕೂಟ ಯಶಸ್ಸಿಯಾಗಿ ನೆರವೇರಲಿ ಎಂದರು.
ಎಸ್ಪಿ ಡಾ. ರಾಮ್ ಎಲ್.ಅರಸಿದ್ದಿ ಮಾತನಾಡಿದರು. ಕ್ರೀಡಾ ಜ್ಯೋತಿ ಬೆಳಗವು ಮೂಲಕ ಕ್ರೀಡಾಕೂಟಕ್ಕೆ ಚಾಲನೆ ದೊರೆಯಿತು. ಸ್ಪರ್ಧಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ತುಪಾಕಿ ಸಿಡಿಸುವ ಮೂಲಕ ಓಟ ಸ್ಪರ್ಧೆಗೆ ಡಿಸಿ ಚಾಲನೆ ನೀಡಿದರು. ಮೊದಲ ದಿನ ವೈಯಕ್ತಿಕ ಆಟಗಳು ನಡೆದವು. ಲಾಂಗ್ ಜಂಪ್, ಹೈಜಂಪ್, ಗುಂಡು ಎಸೆತ, ಜಾವೆಲಿನ್ ಥ್ರೋ, ಓಟದ ಸ್ಪರ್ಧೆಗಳಲ್ಲಿ ಪೊಲೀಸರು ಭಾಗಿಯಾದರು. ಎಎಸ್ಪಿ ಹೇಮಂತ್ ಕುಮಾರ್, ಡಿವೈಎಸ್ಪಿಗಳಾದ ಸಿದ್ದಲಿಂಗಪ್ಪಗೌಡ ಪಾಟೀಲ್, ಮುತ್ತಣ್ಣ ಸರವಗೊಳ ಇತರರಿದ್ದರು.