

ಕೊಪ್ಪಳ: ಗ್ರಾಮೀಣ ಭಾಗದಲ್ಲಿ ಸಾಕ್ಷರತೆ ಹೆಚ್ಚಿಸಲು ಗ್ರಂಥಾಲಯಗಳು ಸ್ಥಳಿಯ ಶಿಕ್ಷಣ ಕೇಂದ್ರಗಳಂತೆ ಕೆಲಸ ಮಾಡಬೇಕೆಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.
ನಗರದ ಜಿಪಂ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಗ್ರಾಪಂ ಮೇಲ್ವಿಚಾರಕರಿಗೆ ಗುರುವಾರ ಹಮ್ಮಿಕೊಂಡಿದ್ದ ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಗ್ರಂಥಾಲಯಗಳ ಕಾರ್ಯಚಟುವಟಿಕೆ ಸಕ್ರಿಯವಾಗಿ ನಡೆಯುತ್ತಿದೆ. ಕಳೆದ ವರ್ಷ ರಾಷ್ಟ್ರ ಪ್ರಶಸ್ತಿ ಸಹ ಲಭಿಸಿದೆ. ಕೇರಳ ಬಳಿಕ ರಾಜ್ಯ ಹೆಚ್ಚು ಚಟುವಟಿಕೆ ಹಮ್ಮಿಕೊಳ್ಳುತ್ತಿದೆ. ಕಕ ಭಾಗ, ಅದರಲ್ಲೂ ಕೊಪ್ಪಳದಿಂದ ಮೊದಲು ಆರಂಭವಾಗಿವೆ. ಮೊದಲು ಸಣ್ಣ ಮಕ್ಕಳ ಪುಸ್ತಕಗಳಿರುತ್ತಿರಲಿಲ್ಲ. ಜಿಲ್ಲೆಯಲ್ಲಿ ಹಮ್ಮಿಕೊಂಡ ಪುಸ್ತಕ ಜೋಳಿಗೆ ಕಾರ್ಯಕ್ರಮ ಮಾದರಿಯಾಗಿದೆ. ಮಕ್ಕಳ ಸ್ನೇಹಿ, ಡಿಜಿಟಲ್ ಹಾಗೂ ಅರಿವು ಕೇಂದ್ರಗಳಾಗಿ ಗ್ರಂಥಾಲಯ ಬದಲಾಗಿವೆ. ಮುಂದೆ ಕೌಶಲ ಕೇಂದ್ರಗಳಾಗಲಿವೆ ಎಂದರು.
ಹಿರೇ ಬೆಣಕಲ್ ಬೆಟ್ಟ ಯುನೆಸ್ಕೊ ವಿಶ್ವ ಪಾರಂಪರಿಕ ತಾತ್ಕಾಲಿಕ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. ಈ ಬಗ್ಗೆ ಹಲವು ಲೇಖನಗಳು ಬಂದಿವೆ. ಅಂಥ ಪುಸ್ತಕಗಳ ಜತೆಗೆ ಅಂಜನಾದ್ರಿ, ಕಿನ್ನಾಳ ಕಲೆ, ಭಾಗ್ಯನಗರ ಸೀರೆ ಹಾಗೂ ಇತರ ಐತಿಹಾಸಿಕ ಸ್ಥಳಗಳು, ಕೊಪ್ಪಳದ ಇತಿಹಾಸ ಇರುವ ಪುಸ್ತಕಗಳನ್ನು ಸಂಗ್ರಹಿಸಿಡುವಂತೆ ಸೂಚಿಸಿದರು.
ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಮಾತನಾಡಿ, ಗ್ರಂಥಾಲಯಗಳು ಗ್ರಾಮೀಣ ಭಾಗದಲ್ಲಿ ಸಾಮಾಜಿಕ ಬದಲಾವಣೆ ತರುತ್ತವೆ. ಗ್ರಾಪಂ ಜತೆಗೆ ಇತರ 155 ಗ್ರಾಮಗಳಲ್ಲಿ ಗ್ರಂಥಾಲಯ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಸ್ಪರ್ಧಾತ್ಮಕ ಪರೀೆ ಅಭ್ಯಾಸಕ್ಕಾಗಿ ಯುವಕರು ಗ್ರಂಥಾಲಯ ಉಪಯೋಗಿಸಿಕೊಳ್ಳುತ್ತಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಇತ್ತೀಚೆಗೆ ಒಬ್ಬರು ಪಿಡಿಒ, ಮತ್ತೊಬ್ಬರು ಪಿಎಸ್ಐ ಆಗಿದ್ದಾರೆ. ಎಲ್ಲ ಗ್ರಂಥಾಲಯಗಳಲ್ಲಿ ಸ್ಪರ್ಧಾತ್ಮಕ ಪರೀಾ ಪುಸ್ತಕಗಳಿರುವಂತೆ ನೋಡಿಕೊಳ್ಳಿ. ಗ್ರಾಪಂ ಮೂಲಕ ಬೇಡಿಕೆ ಕಳಿಸಿದರೆ, ಪುಸ್ತಕ ಕಳಿಸಿಕೊಡಲಾಗುವುದು. ಸ್ಪರ್ಧಾತ್ಮಕ ಪರೀೆಗಳಿಗೆ ಅಭ್ಯಾಸ ಮಾಡುವವರಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದೆಂದರು.
ಟಾಟಾ ಕಲಿಕಾ ತಾಲೂಕು ಕಾರ್ಯಕ್ರಮ ಅಧಿಕಾರಿ ಶಿವಕುಮಾರ ಯಾದವ, ಸಂಯೋಜಕ ಕಲ್ಲಪ್ಪ ತಳವಾರ ಇದ್ದರು.