

ಕೊಪ್ಪಳ: ಬರಗಾಲ ಅಂಗವಾಗಿ ಸರ್ಕಾರದಿಂದ ರೈತರಿಗೆ ವಿತರಿಸುವ ಪರಿಹಾರ ಮೊತ್ತವನ್ನು ಸಾಲದ ಖಾತೆಗೆ ಜಮಾ ಮಾಡುವಂತಿಲ್ಲವೆಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಬ್ಯಾಂಕ್ ಅಧಿಕಾರಿಗಳಿಗೆ ಎಚ್ಚರಿಸಿದರು.
ಜಿಲ್ಲೆಯ ಬ್ಯಾಂಕರ್ಸ್ ಹಾಗೂ ಆರ್ಬಿಐ ಪ್ರತಿನಿಧಿಗಳೊಂದಿಗೆ ಗುರುವಾರ ಆಯೋಜಿಸಿದ್ದ ಸಭೆ ಉದ್ದೇಶಿಸಿ ಮಾತನಾಡಿದರು.
ಕಳೆದ ಸಾಲಿನಲ್ಲಿ ಜಿಲ್ಲೆಯ ಏಳು ತಾಲೂಕುಗಳನ್ನು ಬರ ಪೀಡಿತವೆಂದು ಘೋಷಿಸಲಾಗಿದೆ. ಸರ್ಕಾರದಿಂದ ಇನ್ಪುಟ್ ಸಬ್ಸಿಡಿ ಜಮಾ ಮಾಡಲಾಗುತ್ತಿದೆ. ಕೆಲ ಬ್ಯಾಂಕುಗಳು ಸಾಲದ ಖಾತೆಗೆ ಜಮಾ ಮಾಡಿಕೊಳ್ಳುತ್ತಿವೆ ಎಂಬ ದೂರುಗಳು ಕೇಳಿ ಬರುತ್ತಿವೆ. ಹೀಗೆ ಮಾಡಿದಲ್ಲಿ ಎಸ್ಡಿಆರ್ಎ್, ಎನ್ಡಿಆರ್ಎ್ ನಿಯಮ ಉಲ್ಲಂಘಿಸಿದಂತಾಗುತ್ತದೆ. ನಿಮ್ಮ ಅಧೀನದಲ್ಲಿ ಬರುವ ಎಲ್ಲ ಬ್ಯಾಂಕ್ಗಳು ಹಾಗೂ ಬ್ಯಾಂಕ್ ಶಾಖೆಗಳಿಗೆ ತಕ್ಷಣ ಸೂಚನೆ ನೀಡಿ. ಬರ ಪರಿಹಾರ ಮೊತ್ತವನ್ನು ಸಾಲದ ಖಾತೆಗೆ ಜಮಾ ಮಾಡಿಕೊಳ್ಳದಂತೆ ನಿರ್ದೇಶನ ನೀಡುವಂತೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಈಗಾಗಲೇ ರೈತರ ಖಾತೆಗೆ ಬೆಳೆ ಪರಿಹಾರ ಪಾವತಿಸಲಾಗುತ್ತಿದೆ. ಕೆಲ ತಾಂತ್ರಿಕ ಕಾರಣಗಳಿಂದ ಇನ್ನೂ ಕೆಲವು ರೈತರಿಗೆ ಬೆಳೆ ಪರಿಹಾರ ಮೊತ್ತ ಜಮೆ ಆಗಿರುವುದಿಲ್ಲ. ಬ್ಯಾಂಕ್ ಖಾತೆಗೆ ಸಂಬಂಧಿಸಿದ ತಾಂತ್ರಿಕ ತೊಂದರೆಗಳನ್ನು ಬ್ಯಾಂಕ್ ಸಿಬ್ಬಂದಿ ಪರಿಹರಿಸಬೇಕು. ರೈತರೊಂದಿಗೆ ಸೌಜನ್ಯದಿಂದ ವರ್ತಿಸಿ. ಪರಿಹಾರ ಮೊತ್ತ ಜಮಾ ಆಗದ ರೈತರ ಸಹಾಯಕ್ಕಾಗಿ ಸಹಾಯವಾಣಿ ತೆರೆಯಲಾಗಿದೆ. ರೈತರು ಸಹಾಯವಾಣಿಗೆ ಕರೆ ಮಾಡಿ ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರ, ನಾಡ ಕಚೇರಿ ಅಥವಾ ಕಂದಾಯ ಇಲಾಖೆಗಳಿಗೆ ಸಂಪರ್ಕಿಸಬಹುದು. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಿದರು.
ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್., ಲೀಡ್ ಬ್ಯಾಂಕ್ ವ್ಯಸ್ಥಾಪಕ ವೀರೇಂದ್ರ, ಆರ್ಬಿಐ ವ್ಯವಸ್ಥಾಪಕ ಮೋನಿ ರಾಜಬ್ರಹ್ಮ, ನಬಾರ್ಡ್ ಡಿಡಿಎಂ ಎಂ. ಮಹದೇವ ಕೀರ್ತಿ ಇತರರಿದ್ದರು.