

ಕೊಪ್ಪಳ: ರೈತರು ಸಾವಯವ ಕೃಷಿ ಅಳವಡಿಸಿಕೊಳ್ಳಬೇಕು. ಇಲಾಖೆ ಅಧಿಕಾರಿಗಳು ಸಾವಯವ ಕೃಷಿಕರಿಗೆ ಸೂಕ್ತ ಮಾರುಕಟ್ಟೆ ಒದಗಿಸಿಕೊಡಬೇಕೆಂದು ಡಿಸಿ ನಲಿನ್ ಅತುಲ್ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಜಿಲ್ಲಾಡಳಿತದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಾವಯವ ಮೇಳ ಹಾಗೂ ಚರ್ಚಾಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಅತಿಯಾದ ರಸಾಯನಿಕ ಬಳಕೆಯಿಂದ ಭುಮಿ ಲವತ್ತತೆ ಕಳೆದುಕೊಳ್ಳುತ್ತದೆ. ರಸಾಯನಿಕ ಬಳಸಿದ ಆಹಾರ ಪದಾರ್ಥಗಳು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಭೂಮಿ ಹಾಗೂ ಜನರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಸಾವಯವ ಕೃಷಿ ಪದ್ಧತಿ ಮಹತ್ವ ಪಡೆದಿದೆ. ಜಿಲ್ಲೆಯ 3 ಲಕ್ಷ ಎಕರೆ ಭತ್ತ ಬೆಳೆದರೂ ಸಾವಯವ ಪದ್ಧತಿ ಇಲ್ಲ. ಈ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕಿದೆ. ಸಾವಯವ ಉತ್ಪನ್ನಕ್ಕೆ ಬೇಡಿಕೆ ಇದ್ದು, ಉತ್ತಮ ಬೆಲೆ ದೊರೆಯಲಿದೆ. ಬ್ರ್ಯಾಂಡಿಂಗ್ ಮಾಡಿದರೆ ಒಳ್ಳೆಯ ಬೆಲೆ ಸಿಗಲಿದೆ. ಗ್ರಾಹಕರಿಗೂ ಗುಣಮಟ್ಟದ ಆಹಾರ ಸಿಗಲಿದೆ. ತೋಟಗಾರಿಕೆಗೂ ಜಿಲ್ಲೆಯ ವಾತಾವರಣ ಪೂರಕವಾಗಿದೆ. ರೈತರು ಶೇ.60ರಷ್ಟು ಕೃಷಿ, ಬಾಕಿ 40ರಷ್ಟು ತೋಟಗಾರಿಕೆಗೆ ಆದ್ಯತೆ ನೀಡಬೇಕೆಂದರು.
ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಮಾತನಾಡಿ, ಜಿಲ್ಲೆಯಲ್ಲಿ 2.80ಲಕ್ಷ ರೈತರು, 4.30 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಇದೆ. 4 ಸಾವಿರ ಹೆಕ್ಟೇರ್ನಲ್ಲಿ 3 ಸಾವಿರ ರೈತರು ಮಾತ್ರ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಅಳವಂಡಿ ಭಾಗದಲ್ಲಿ ರೈತರೊಬ್ಬರು 10 ಎಕರೆ ಜಮೀನಿನಲ್ಲಿ ಕಳೆದ ಮೂರು ವರ್ಷದಿಂದ ಸಾವಯವ ಪದ್ಧತಿಯಲ್ಲಿ ದಾಳಿಂಬೆ ಬೆಳೆದು 30&40 ಲಕ್ಷ ರೂ. ಗಳಿಸುತ್ತಿದ್ದಾರೆ. ಭವಿಷಯದಲ್ಲಿ ಸಾವಯವ ಕೃಷಿಗೆ ಬೇಡಿಕೆ ಬರಲಿದೆ. ಕೃಷಿಯೊಂದಿಗೆ ಹೈನುಗಾರಿಕೆ, ಪಶುಪಾಲನೆ, ಕೋಳಿ ಸಾಕಣೆ ಮಾಡಬೇಕೆಂದು ಸಲಹೆ ನೀಡಿದರು.
ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ್, ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್., ಐಎಟಿ ರಾಜ್ಯ ಕಾರ್ಯದರ್ಶಿ ವಿ.ಕೆ. ಕಮತರ ಮಾತನಾಡಿದರು. ರಾಯಚೂರು ಕೃಷಿ ವಿವಿ ಸಾವಯವ ವಿಭಾಗ ಮುಖ್ಯಸ್ಥ ಡಾ.ಬಸವಣ್ಣೆಪ್ಪ ವಿಶೇಷ ಉಪನ್ಯಾಸ ನೀಡಿದರು.
ರಾಜ್ಯ ಮಟ್ಟದಲ್ಲಿ ಉದಯೋನ್ಮುಖ ಕೃಷಿ ಪ್ರಶಸ್ತಿ ಪಡೆದ ಜಿಲ್ಲೆಯ ರೈತರಾದ ಬಸಯ್ಯ ಹಿರೇಮಠ, ವೆಂಕಟೇಶರಾವ್, ಶ್ರೀನಿವಾಸರಾವ್ ದೇಸಾಯಿ, ಅಜಯಕುಮಾರ್ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.
ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಶಿವಣ್ಣ ಮೂಲಿಮನಿ, ರಾಯಚೂರು ಕೃಷಿ ವಿವಿ ಸದಸ್ಯ ತಿಮ್ಮಣ್ಣ ಚೌಡಿ, ಕೊಪ್ಪಳ ಕೃಷಿ ಇಲಾಖೆ ಉಪನಿರ್ದೇಶಕ ಎಲ್.ಸಿದ್ದೇಶ, ಕೃಷಿಕ ಸಮಾಜದ ಸದಸ್ಯ ವಿರುಪಣ್ಣ ನವೋದಯ, ಗಂಗಾವತಿ ಕೆವಿಕೆ ವಿಜ್ಞಾನಿ ಡಾ.ನಾರಪ್ಪ, ಸಹಾಯಕ ಕೃಷಿ ನಿರ್ದೇಶಕರಾದ ಶಶಿಕಲಾ, ಶೇತ್ವಾ ಇತರರಿದ್ದರು.