

ಕೊಪ್ಪಳ: ಲೋಕಸಭೆ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಸೂಚಿಸಿದರು.
ನಗರದ ಜಿಪಂ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಚುನವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿಯೊಂದಿಗೆ ಬುಧವಾರ ಸಭೆ ನಡೆಸಿ ಮಾತನಾಡಿದರು.
ಚೆಕ್ಪೋಸ್ಟ್ನಲ್ಲಿ ವಾಹನ ತಪಾಸಣೆ ಮಾಡುವುದನ್ನು ವಿಡಿಯೋ ಮಾಡಿಕೊಳ್ಳಿ. ದಾಖಲೆ ಇಲ್ಲದೆ ಸಾಗಿಸುವ ಹಣ ಹಾಗೂ ಇತರ ವಸ್ತುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ. ನಾಮಪತ್ರ ಸಲ್ಲಿಸಿದ ಅಭ್ಯರ್ಥಿ ಅಥವಾ ಅವರ ಪರವಾಗಿ ನೇಮಕವಾದ ಚುನಾವಣಾ ಏಜೆಂಟ್ಗಳು ಮಾತ್ರ ವಿವಿಧ ಅನುಮತಿಗಾಗಿ ಅರ್ಜಿ ಸಲ್ಲಿಸಬಹುದು. ಈ ಬಗ್ಗೆ ಸಹಾಯಕ ಚುನಾವಣಾಧಿಕಾರಿಗಳು ಕ್ರಮವಹಿಸಿ. ಪ್ರಚಾರ ಕಾರ್ಯಕ್ರಮಗಳು, ಸಮಾವೇಶಗಳ ಸಂಪೂರ್ಣ ವೆಚ್ಚವನ್ನು ಸಂಬಂಧಪಟ್ಟ ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಸೇರಿಸಿ. ಅಭ್ಯರ್ಥಿಗಳ ಚುನಾವಣಾ ವೆಚ್ಚ ಕುರಿತು ತೀವ್ರ ಕಟ್ಟೆಚ್ಚರವಹಿಸಿ. ಅಬಕಾರಿ ಹಾಗೂ ಇತರ ಪ್ರಕರಣಗಳ ವರದಿ ನಿತ್ಯ ದಾಖಲಿಸುವಂತೆ ನಿರ್ದೇಶಿಸಿದರು.
85 ವರ್ಷ ಮೇಲ್ಪಟ್ಟವರು, ವಿಕಲಚೇತನ ಮತದಾರರು ಮನೆಯಿಂದ ಮತ ಚಲಾಯಿಸುವಾಗ ಪೊಲೀಸರು ಕಡ್ಡಾಯವಾಗಿ ಹಾಜರಿರಬೇಕು. ಮತದಾನ ವೇಳೆ ಗೌಪ್ಯತೆ ಕಾಪಾಡಿ. ಉಳಿದ ಪ್ರಕ್ರಿಯೆ ವಿಡಿಯೋ ಮಾಡಿ. ಚುನಾವಣಾ ಆಯೋಗದ ನಿರ್ದೇಶನದಂತೆ ಎಲ್ಲ ಕ್ರಮ ಜರುಗಿಸಿ. ಪ್ರತಿಯೊಬ್ಬ ಅರ್ಹ ಮತದಾರರಿಗೆ ವೋಟರ್ ಸ್ಲಿಪ್ ವಿತರಿಸಲು ಆಯಾ ಮತಗಟ್ಟೆಗಳ ಬಿಎಲ್ಒಗಳಿಗೆ ಸೂಚಿಸಿ. ಮತಗಟ್ಟೆಗಳಲ್ಲಿ ಮೂಲ ಸೌಕರ್ಯ ಕಲ್ಪಿಸಿ. ಮತದಾನದ ದಿನ ಹಾಗೂ ಡಿಮಸ್ಟರಿಂಗ್ ಮಾಡಲು ಎದುರಾಗುವ ಸಮಸ್ಯೆಗಳ ಕುರಿತು 20&25 ಪ್ರಶ್ನೆಗಳನ್ನು ಗುರುತಿಸಿ ತರಬೇತಿಯಲ್ಲಿ ಟೆಸ್ಟ್ ನೀಡಿ ಪರಿಶೀಲನೆ ನಡೆಸುವಂತೆ ಸೂಚಿಸಿದರು.
ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಎಸ್ಪಿ ಯಶೋದಾ ವಂಟಗೋಡಿ, ಎಡಿಸಿ ಸಾವಿತ್ರಿ ಕಡಿ ಇತರರಿದ್ದರು.