

ಕೊಪ್ಪಳ: ಬಾಲ್ಯ ವಿವಾಹ ನಡೆಯುತ್ತಿದ್ದಲ್ಲಿ ಸಾರ್ವಜನಿಕರು ತಕ್ಷಣ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ತನಿಖೆ ವೇಳೆ ಶಾಲಾ ಮುಖ್ಯ ಶಿಕ್ಷಕರು ದಾಖಲಾತಿ ಒದಗಿಸಿ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಸಾಕಷ್ಟು ಜಾಗೃತ ನಡುವೆಯೂ ಬಾಲ್ಯವಿವಾಹ ನಡೆಸಲು ಯತ್ನಗಳು ಮುಂದುವರೆದಿವೆ. ಮದುವೆಗೆ ಮುಂಚೆ ವಿಷಯ ಗೊತ್ತಾದಲ್ಲಿ ಬಾಲಕಿ ರಕ್ಷಣೆಗೆ ಅವಕಾಶವಿದೆ. ಆದರೆ, ಕೆಲವರು ಮದುವೆಯ ಕುರುಹುಗಳು ದೊರೆಯದಂತೆ ಮುಚ್ಚಿಡುತ್ತಾರೆ. ಬಾಲ್ಯ ವಿವಾಹದಿಂದ ಬಾಲಕಿ ದೈಹಿಕ, ಸಾಮಾಜಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮವಾಗಲಿದೆ. ಶಿಕ್ಷಣದಿಂದಲೂ ವಂಚಿತಳಾಗುತ್ತಾಳೆ. ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಧರಿಸಿದಲ್ಲಿ ತಾಯಿ&ಮಗುವಿನ ಆರೋಗ್ಯದ ಮೇಲೆ ದುಷ್ಟ ಪರಿಣಾಮ ಬೀರುತ್ತದೆ. ಹೀಗಾಗಿ ಬಾಲ್ಯ ವಿವಾಹ ನಡೆಯದಂತೆ ಸಂಬಂಧಿಸಿದ ಅಧಿಕಾರಿಗಳು ತಡೆಯಬೇಕು. ಶಾಲಾ ದಾಖಲಾತಿಯನ್ನು ಮುಖ್ಯ ದಾಖಲೆಯಾಗಿ ಪರಿಗಣಿಸಬೇಕು. ತನಿಖೆ ವೇಳೆ ಮುಖ್ಯ ಶಿಕ್ಷಕರು ದಾಖಲಾತಿ ವಿವರ ನೀಡಿ ಸಹಕರಿಸಬೇಕೆಂದು ತಿಳಿಸಿದರು.
ಹರೆಯದ ಹೆಣ್ಣುಮಕ್ಕಳ ಸಬಲೀಕರಣಕ್ಕೆ ಸ್ಪೂರ್ತಿ ಯೋಜನೆ ಜಾರಿಯಾಗಿದೆ. ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಗುಂಪು ರಚನೆ, ಜೀವನ ಕೌಶಲ ಶಿಕ್ಷಣ, ಕಲಿಕಾ ಪ್ರವಾಸ, ನಾಯಕತ್ವ ಮತ್ತು ಸಂವಹನ ತರಬೇತಿ, ಸಂವಾದಗಳು, ಬೋಧನಾ ಅವಧಿ ಕಲಿಸಲಾಗುತ್ತಿದೆ. ಅಂತರಕ್ರಿಯಾತ್ಮಕ ರಂಗಭೂಮಿ, ಕೈತೋಟ ನಿರ್ವಹಣೆ, ಪೂರಕ ಪೌಷ್ಟಿಕ ಆಹಾರ, ಗ್ರಂಥಾಲಯಗಳಿಗೆ ಬೆಂಬಲ, ಯೋಜನೆಗಳೊಂದಿಗೆ ಸಂಯೋಜನೆಯಲ್ಲಿ ಹುಡುಗಿಯರನ್ನು ಒಳಗೊಂಡು ಚಟುವಟಿಕೆ ನಡೆಸಲಾಗುತ್ತದೆ. ಇದರೊಂದಿಗೆ ವಸತಿ ಶಾಲೆವಿದ್ಯಾರ್ಥಿನಿಯರಿಗೂ ರಕ್ಷಣಾ ಕೌಶಲ ಕಲಿಸಲು ಕ್ರಮವಹಿಸುವಂತೆ ನಿರ್ದೇಶಿಸಿದರು.
ಅಂಗನವಾಡಿಗಳಲ್ಲಿ ಶಾಲಾ ಪೂರ್ವ ಶಿಕ್ಷಣ ಗುಂಟ್ಟದಿಂದ ಕೂಡಿರಲಿ. ಮಕ್ಕಳಲ್ಲಿ ಆಸಕ್ತಿ ಹೆಚ್ಚಿಸಿ. ಕುತೂಹಲವನ್ನು ಧನಾತ್ಮಕವಾಗಿ ಪರಿವರ್ತಿಸಿ ಸಾಮಾನ್ಯ ವಿಷಯಗಳನ್ನು ಕಲಿಸಬೇಕು. ಸಖಿ ಒನ್ ಸ್ಟಾಪ್ ಸೆಂಟರ್, ಪ್ರಧಾನಮಂತ್ರಿ ಮಾತೃವಂದನಾ ಯೋಜನೆ, ಮಹಿಳಾ ಸಹಾಯವಾಣಿ, ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ. ಮಹಿಳಾ ಸಹಾಯವಾಣಿಗೆ ಬರುವ ದೂರುಗಳಿಗೆ ತಕ್ಷಣವೇ ಸ್ಪಂದಿಸಿ ಸೂಕ್ತ ಕ್ರಮ ವಹಿಸಿ.ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ, ಪೂರಕ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ತಾಕೀತು ಮಾಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ತಿಪ್ಪಣ್ಣ ಸಿರಸಗಿ ಮಾತನಾಡಿ, ಪಾಲನಾ ಯೋಜನೆಯಡಿ ಕಳೆದ ಸಾಲಿನಲ್ಲಿ 931 ಮಕ್ಕಳಿಗೆ ತಲಾ 1 ಸಾವಿರ ರೂ. ನೆರವು ನೀಡಲಾಗಿದೆ. ಪ್ರಸಕ್ತ ವರ್ಷ 915ಮಕ್ಕಳನ್ನು ಗುರುತಿಸಿದ್ದು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಾಯೋಜಕತ್ವ ಯೋಜನೆಯಡಿ 240 ಅರ್ಜಿ ಬಂದಿವೆ. ಕಳೆದ ಸಾಲಿನಲ್ಲಿ 208 ಪೋಕ್ಸೋ ಪ್ರಕರಣ ದಾಖಲಾಗಿವೆ. 103 ಪ್ರಕರಣಗಳಲ್ಲಿ ಆರೋಪಿ ಖುಲಾಸೆಯಾದರೆ, ನಾಲ್ಕರಲ್ಲಿ ಶಿೆಯಾಗಿದೆ. 103 ವಿಚಾರಣಾ ಹಂತದಲ್ಲಿವೆ ಎಂದು ಮಾಹಿತಿ ನೀಡಿದರು.
ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಡಿಎಚ್ಒ ಡಾ.ಟಿ.ಲಿಂಗರಾಜು, ಕುಟುಂಬ ಕಲ್ಯಾಣಾಧಿಕಾರಿ ಡಾ.ರವೀಂದ್ರನಾಥ, ಆರ್ಸಿಎಚ್ ಅಧಿಕಾರಿ ಡಾ.ಪ್ರಕಾಶ, ನಿರೂಪಣಾಧಿಕಾರಿ ಗಂಗಪ್ಪ, ಯುನಿಸ್ೆ ಹರೀಶ್ ಜೋಗಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಇತರರಿದ್ದರು.