ಬಿತ್ತನೆ ಬೀಜ-ರಸಗೊಬ್ಬರ ಕೊರತೆಯಾಗದಿರಲಿ, ಡಿಸಿ ನಲಿನ್​ ಅತುಲ್​ ಸೂಚನೆ

dc meeting in koppal about agriculture soing works farmers
ಕೊಪ್ಪಳದಲ್ಲಿ ಡಿಸಿ ನಲಿನ್​ ಅತುಲ್​ ಅಧ್ಯಕ್ಷತೆಯಲ್ಲಿ ಸೋಮವಾರ ಕೃಷಿ ಅಧಿಕಾರಿಗಳ ಸಭೆ ನಡೆಯಿತು. ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ, ಎಡಿಸಿ ಸಾವಿತ್ರಿ ಕಡಿ, ಎಸಿ ಕ್ಯಾ.ಮಹೇಶ ಮಾಲಗಿತ್ತಿ, ಡಿಯುಡಿಸಿ ಪಿಡಿ ರೇಷ್ಮಾ ಹಾನಗಲ್​, ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಅಧಿಕಾರಿಗಳಿದ್ದರು.
Published on

ಕೊಪ್ಪಳ: ಮುಂಗಾರು ಚುರುಕು ಪಡೆದಿದೆ. ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ ಸಂಗ್ರಹಿಸಿ. ಬಿತ್ತನೆ ವೇಳೆ ರೈತರಿಗೆ ಯಾವುದೇ ತೊಂದರೆ ಆಗದಂತೆ ಕ್ರಮವಹಿಸಿ ಎಂದು ಜಿಲ್ಲಾಧಿಕಾರಿ ನಲಿನ್​ ಅತುಲ್​ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಕೃಷಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.

ರೈತರ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜ, ರಸಗೊಬ್ಬರ ಪೂರೈಸಿ. ಸರ್ಕಾರ ನಿಗದಿಪಡಿಸಿದ ದರದಲ್ಲೇ ಮಾರಾಟವಾಗುವಂತೆ ನೋಡಿಕೊಳ್ಳಿ. ಕಳಪೆ ಬೀಜ, ಗೊಬ್ಬರ ಮಾರಾಟವಾಗದಂತೆ ನೋಡಿಕೊಳ್ಳಿ. ಅಂಥ ವ್ಯವಹಾರ ಕಂಡುಬಂದಲ್ಲಿ ಪ್ರಕರಣ ದಾಖಲಿಸಿ. ಮಾರಾಟಗಾರರು ದರಪಟ್ಟಿ ಪ್ರದರ್ಶಿಸುವಂತೆ ಸೂಚಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ ಮಾತನಾಡಿ, ಮಳೆಗಾಲ ಆರಂಭವಾಗಿದೆ. ಕಂದಾಯ, ಕೃಷಿ, ತೋಟಗಾರಿಕೆ ಹಾಗೂ ಇತರ ಅಧಿಕಾರಿಗಳೊಂದಿಗೆ ಗ್ರಾಪಂ ಪಿಡಿಒ ಸಮನ್ವಯ ಸಾಧಿಸಿ ಕೆಲಸ ಮಾಡಿ. ಎಲ್ಲ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು ಕರ್ತವ್ಯ ನಿರ್ವಹಿಸಿ ಎಂದರು.

ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್​. ಮಾತನಾಡಿ, ಜಿಲ್ಲೆಯಲ್ಲಿ ವಾಡಿಕೆ ಮಳೆ 28 ಮಿ.ಮೀ. ಇದ್ದು, 61 ಮಿ.ಮೀ.ಆಗಿದೆ. ಶೇ120ರಷ್ಟು ಹೆಚ್ಚುವರಿ ಮಳೆಯಾಗಿದೆ. ಭತ್ತ, ಮೆಕ್ಕೆಜೋಳ, ಸಜ್ಜೆ, ನವಣೆ, ಹೆಸರು, ತೊಗರಿ, ಸೂರ್ಯಕಾಂತಿ, ಅಲಸಂದಿ ಒಟ್ಟು 7,369.49 ಕ್ವಿಂಟಾಲ್​ ಬಿತ್ತನೆ ಬೀಜ ಬಂದಿದ್ದು, 4,707.38 ಕ್ವಿಂಟಾಲ್​ ವಿತರಿಸಲಾಗಿದೆ. 2,662.11 ಕ್ವಿಂಟಾಲ್​ ದಾಸ್ತಾನಿದೆ. ಯೂರಿಯಾ 670 ಟನ್​, ಡಿಎಪಿ 1,620 ಟನ್​, ಎಂಓಪಿ 310 ಟನ್​ ಹಾಗೂ ಕಾಂಪ್ಲೆಕ್ಸ್​ 2,537 ಟನ್​ ಶೇಖರಿಸಲಾಗಿದೆ ಎಂದು ಮಾಹಿತಿ ನೀಡಿದರು. ಪಶುಪಾಲನಾ ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿ 4,68,283.84 ಟನ್​ ಮೇವು ಲಭ್ಯವಿದ್ದು, 31ವಾರಗಳಿಗೆ ಸಾಕಾಗಲಿದೆ ಎಂದು ವಿವರಿಸಿದರು.

ಎಡಿಸಿ ಸಾವಿತ್ರಿ ಕಡಿ, ಎಸಿ ಕ್ಯಾ.ಮಹೇಶ ಮಾಲಗಿತ್ತಿ, ಡಿಯುಡಿಸಿ ಪಿಡಿ ರೇಷ್ಮಾ ಹಾನಗಲ್​, ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಇತರ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net