ದೌರ್ಜನ್ಯ ತಡೆ ಪ್ರಕರಣಗಳಲ್ಲಿ ಪರಿಹಾರ ಕಲ್ಪಿಸಲು ಡಿಸಿ ನಲಿನ್ ಅತುಲ್ ಸೂಚನೆ

dc meeting about sc-st people complaint reviwe meeting
ಕೊಪ್ಪಳದಲ್ಲಿ ಶನಿವಾರ ಡಿಸಿ ನಲಿನ್​ ಅತುಲ್​ ಅಧ್ಯಕ್ಷತೆಯಲ್ಲಿ ದೌರ್ಜನ್ಯ ನಿಯಂತ್ರಣ, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಯಿತು. ಎಸ್ಪಿ ಯಶೋದಾ ವಂಟಗೋಡಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಾಜು ತಳವಾರ, ಸಮಿತಿ ಸದಸ್ಯರಾದ ದ್ಯಾಮಣ್ಣ ಗೊಂದಿ, ಚಂದಾಲಿಂಗಪ್ಪ ಮಾದರ, ಸುಂಕಪ್ಪ ಕೆ.ಮಾಲಗಿತ್ತಿ ಇದ್ದರು.
Published on

ಕೊಪ್ಪಳ: ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಪರಿಹಾರ ಒದಗಿಸಲು ಅಗತ್ಯ ಕ್ರಮ ವಹಿಸಿ ಎಂದು ಜಿಲ್ಲಾಧಿಕಾರಿ ನಲಿನ್​ ಅತುಲ್​ ಸೂಚಿಸಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ದೌರ್ಜನ್ಯ ನಿಯಂತ್ರಣ, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದೌರ್ಜನ್ಯ, ಗಲಭೆಯಲ್ಲಿ ಸಂಸ್ತ್ರಸ್ತರೆಂದು ಸಾಬೀತಾದರೆ ತಕ್ಷಣ ನಿಗದಿತ ಪರಿಹಾರ ನೀಡಿ. ಪಜಾ, ಪಪಂ ಕಾಲನಿಗಳಲ್ಲಿ ರಸ್ತೆ, ಕುಡಿವ ನೀರು, ಶೌಚಗೃಹ, ಚರಂಡಿ ಸೇರಿ ಮೂಲ ಸೌಕರ್ಯ ಕಲ್ಪಿಸಿ. ದೌರ್ಜನ್ಯ ನಡೆದ ವೇಳೆ ದೂರು ಸ್ವೀಕರಿಸಿ. ವಿನಾ ಕಾರಣ ನಿರಾಕರಿಸಬೇಡಿ. ಬಾಕಿ ಪ್ರಕರಣಗಳ ವಿಲೇವಾರಿ ನಡೆಸಿ. ಸಮುದಾಯ ಭವನ, ಅಂಗನವಾಡಿ ಸೇರಿ ಇತರ ಕಾಮಗಾರಿಗಳನ್ನು ಕಾಲವಧಿಯಲ್ಲಿ ಪೂರ್ಣಗೊಳಿಸಿ ಎಂದು ನಿರ್ದೇಶನ ನೀಡಿದರು.

ಎಸ್ಪಿ ಯಶೋದಾ ವಂಟಗೋಡಿ ಮಾತನಾಡಿ, ಈವರೆಗೆ ಜಿಲ್ಲೆಯಲ್ಲಿ ದಾಖಲಾದ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಸಂತ್ರಸ್ತರಿಗೆ ಪರಿಹಾರ ಒದಗಿಸಲಾಗಿದೆ. ಪ್ರತಿ ಠಾಣೆಯಲ್ಲಿ ತಿಂಗಳ ಎರಡನೇ ಭಾನುವಾರ ಸಭೆ ನಡೆಸಿ ಪ್ರಗತಿ ಪರಿಶೀಲಿಸಲಾಗುತ್ತಿದೆ ಎಂದರು.

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಾಜು ತಳವಾರ ಮಾತನಾಡಿ, 2023ರಲ್ಲಿ 37 ದೌರ್ಜನ್ಯ ಪ್ರಕರಣ ದಾಖಲಾಗಿವೆ. 9 ಎ್​ಐಆರ್​, 22 ಚಾರ್ಜ್​ಶೀಟ್​ ಹಂತದಲ್ಲಿವೆ. 31 ಪ್ರಕರಣಗಳಲ್ಲಿ 80,75,000 ಗಳ ಪರಿಹಾರ ವಿತರಿಸಲಾಗಿದೆ. 6ರಲ್ಲಿ ಪರಿಹಾರ ವಿತರಣೆ ಬಾಕಿ ಇದೆ. ನ್ಯಾಯಾಲಯದಲ್ಲಿ ಒಟ್ಟು 301 ಪ್ರಕರಣ ದಾಖಲಾಗಿವೆ. 58 ರಲ್ಲಿ ಬಿಡುಗಡೆ, 2ರಲ್ಲಿ ಶಿಕ್ಷೆ, ಇತರ ಎರಡು ಸೇರಿ 62 ಪ್ರಕರಣಗಳು ವಿಲೇವಾರಿಯಾಗಿವೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ದ್ಯಾಮಣ್ಣ ಗೊಂದಿ, ಚಂದಾಲಿಂಗಪ್ಪ ಮಾದರ, ಸುಂಕಪ್ಪ ಕೆ.ಮಾಲಗಿತ್ತಿ, ಮರಳಸಿದ್ದಪ್ಪ ಪೂಜಾರ, ಮಾರುತಿ ಚಾಮಲಾಪುರ, ಚಂದ್ರಪ್ಪ ತಾಳೂರ, ಮಾಲತಿ ನಾಯಕ, ಸತೀಶ ಮೋರನಾಳ, ಸಿದ್ದು ಮಣ್ಣಿನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net