

ಕೊಪ್ಪಳ: ಜಿಲ್ಲಾಡಳಿತದಿಂದ ಆ.20ರಂದು ಡಿ.ದೇವರಾಜ ಅರಸು ಜನ್ಮ ದಿನಾಚರಣೆ ಇದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಡಳಿತ ಭವನದ ಕೆಸ್ವಾನ್-&2 ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ನಗರದ ಪ್ರಮುಖ ರಸ್ತೆಗಳನ್ನು ಸ್ವಚ್ಛಗೊಳಿಸಿ. ಕುಡಿವ ನೀರು ಕಲ್ಪಿಸಿ. ಶಿಷ್ಟಾಚಾರದಂತೆ ವೇದಿಕೆ ಕಾರ್ಯಕ್ರಮ ನಡೆಸಿ. ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಿ. ವಿಶೇಷ ಉಪನ್ಯಾಸಕರನ್ನು ಕರೆಸಿ. ಎಲ್ಲ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಭಾಗಿಯಾಗಿ. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಹಮ್ಮಿಕೊಳ್ಳಿ. ವಸತಿ ಶಾಲೆ ಮಕ್ಕಳಿಗೆ ಪ್ರಬಂಧ, ಭಾಷಣ, ರಸಪ್ರಶ್ನೆ, ಕ್ರೀಡೆ ಏರ್ಪಡಿಸಿ ಬಹುಮಾನ ವಿತರಿಸುವಂತೆ ತಾಕೀತು ಮಾಡಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಜಿಲ್ಲಾಧಿಕಾರಿ ನಾಗಮಣಿ ಮಾತನಾಡಿ, ಗವಿಮಠದಿಂದ ಸಾಹಿತ್ಯ ಭವನವರೆಗೆ ಅರಸು ಭಾವಚಿತ್ರ ಮೆರವಣಿಗೆ ಇರಲಿದೆ. ಸಾಹಿತ್ಯ ಭವನದಲ್ಲಿ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಉಪನ್ಯಾಸಕರನ್ನು ಗುರುತಿಸಲಾಗಿದೆ. ಅರ್ಥಪೂರ್ಣ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗುವುದೆಂದರು.
ಜಿಪಂ ಉಪ ಕಾರ್ಯದರ್ಶಿ ಟಿ.ಕೃಷ್ಣಮೂರ್ತಿ, ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮ ಜಿಲ್ಲಾ ವ್ಯವಸ್ಥಾಪಕ ಕರಿಯಪ್ಪ, ತಾಲೂಕು ಅಧಿಕಾರಿ ನಾಗರತ್ನಾ, ವಿಸ್ತರಣಾಧಿಕಾರಿ ರಮೇಶ ಹುಬ್ಬಳ್ಳಿ ಇತರರಿದ್ದರು.