ಶೋ ರೂಮ್​ ಸೇರಿದ ಡಿಸಿ ಕಾರ್​

district koppal dc car seize showroom
Published on

ಕೊಪ್ಪಳ: ಭೂ ಸ್ವಾಧಿನ ಪ್ರಕರಣವೊಂದಲ್ಲಿ ನ್ಯಾಯಾಲಯದಿಂದ ಜಪ್ತಿಗೆ ಆದೇಶವಾಗಿದ್ದ ಕೊಪ್ಪಳ ಡಿಸಿ ಕಾರು ಸರ್ವಿಸ್​ ನೆಪದಲ್ಲಿ ಶೋ ರೋಮ್​ ಸೇರಿದೆ ಎಂಬ ಆರೋಪ ಕೇಳಿ ಬಂದಿದೆ.

ಗಂಗಾವತಿಯ ಹಿರಿಯ ಸಿವಿಲ್​ ನ್ಯಾಯಾಲಯ ಜಪ್ತಿ ಮಾಡುವಂತೆ ಆದೇಶಿಸಿದ್ದ ವಾಹನ ಸಂಖ್ಯೆ ಕೆಎ 01 ಜಿ 9869 ಸದ್ಯ ಕೊಪ್ಪಳದಲ್ಲಿಲ್ಲ. ಬದಲಾಗಿ ಹೊಸಪೇಟೆಯ ಟೊಯೋಟಾ ಶೋ ರೂಮ್​ನಲ್ಲಿದೆ. ಜಯನಗರದ ರಸ್ತೆ ವಿಸ್ತರಣೆಗೆ ಖಾಸಗಿ ಭೂಮಿ ಸ್ವಾಧಿನ ಪಡಿಸಿಕೊಂಡಿದ್ದು ಪರಿಹಾರ ನೀಡಿಲ್ಲ. ಪ್ರಕರಣದಲ್ಲಿ ಭೂ ಮಾಲೀಕರಿಗೆ ಪರಿಹಾರ ವಿತರಣೆಗೆ ನ್ಯಾಯಾಲಯ ಡಿಸಿಗೆ ಸೂಚಿಸಿದೆ. ಅವಧಿಯಲ್ಲಿ ನೀಡದ ಕಾರಣ ಕಾರ್​ ಸೇರಿ ಕಚೇರಿ ಸಾಮಾನು ಜಪ್ತಿಗೆ ಆದೇಶಿಸಿದೆ.

ಏ.17 ರಂದು ಕೋರ್ಟ್​ ಸಿಬ್ಬಂದಿ ಕಾರು ಜಪ್ತಿಗೆ ಕೊಪ್ಪಳಕ್ಕೆ ಬಂದಾಗ ಡಿಸಿ ಕಾರ್​ ಕೀ ಕೊಟ್ಟಿರಲಿಲ್ಲ. ಮರು ದಿನ ಕಚೇರಿ ಕೆಲಸ ಹಿನ್ನೆಲೆ ಹೊರ ಹೋಗಿದೆ. ಸದ್ಯ ಸರ್ವಿಸ್​ ಹೆಸರಿನಲ್ಲಿ ಶೋ ರೂಮ್​ನಲ್ಲಿದೆ. 2 ಲಕ್ಷ ಕಿ.ಮೀ. ಓಡಿದಾಗಲೇ ಸರ್ವಿಸ್​ ಮಾಡಿಸಲಾಗಿದೆ. ಸದ್ಯ ಆಯಿಲ್​ ಬದಲಾಯಿಸಬೇಕಿರುವ ಕಾರಣದಿಂದ ಶೋರೂಮ್​ಗೆ ಬಿಡಲಾಗಿದೆ ಎನ್ನಲಾಗಿದೆ. ಆದರೆ, ಜಪ್ತಿ ಆದೇಶ ಹಿನ್ನೆಲೆಯಲ್ಲಿ ತಪ್ಪಿಸಿಕೊಳ್ಳಲು ಕಾರ್​ ಶೋರೂಮ್​ನಲ್ಲಿ ಬಿಟ್ಟಿದ್ದಾರೆಂಬ ಆರೋಪ ಕೇಳಿ ಬರುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net