

ಕೊಪ್ಪಳ: ಜಿಲ್ಲೆಯಲ್ಲಿ ಅಸ್ಪೃಶ್ಯತೆ ಆಚರಣೆ ತಡೆಯುವುದು, ಭೂ ರಹಿತರಿಗೆ ಭೂಮಿ ಹಂಚಿಕೆ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಸಿ ದಲಿತ ಸಂರ್ಷ ಸಮಿತಿ ಜಿಲ್ಲಾ ಪದಾಧಿಕಾರಿಗಳು ಶುಕ್ರವಾರ ನಗರದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ದಲಿತರಿಗೆ ಸ್ವಾತಂತ್ರ್ಯ ಸಿಕ್ಕಿಲ್ಲ. ಇಂದಿಗೂ ಹಳ್ಳಿಗಳಲ್ಲಿ ಅಸ್ಪೃಶ್ಯತೆ ನಡೆಯುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿ ಇನ್ನೂ ಜೀವಂತ ಇದೆ. ದಿನ ನಿತ್ಯ ದೌರ್ಜನ್ಯ, ಹಲ್ಲೆ, ಜಾತಿ ನಿಂದನೆ ಪ್ರಕರಣಗಳು ನಡೆಯುತ್ತಿವೆ. ಅಸ್ಪೃಶ್ಯತೆ ನಿವಾರಣೆ ಕಾನೂನುಗಳು ಕಡತದಲ್ಲಿಯೇ ಉಳಿದಿವೆ. ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲ. ಜನಪ್ರತಿನಿಧಿಗಳು ನಮ್ಮ ಬೇಡಿಕೆಗಳ ಮನವಿ ಸ್ವೀಕರಿಸಿ ಪರಿಹರಿಸುವ ಭರವಸೆ ನೀಡುವುದು ಬಿಟ್ಟರೆ ಬೇರೆ ಕೆಲಸಗಳಾಗುತ್ತಿಲ್ಲ. ಹಲವು ಬಾರಿ ಪ್ರತಿಭಟನೆ, ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಅಸ್ಪೃಶ್ಯತೆ ಆಚರಣೆ ತಡೆಯಬೇಕು. ಎಸ್ಸಿಪಿ,ಟಿಎಸ್ಪಿ ಅನುದಾನ ದುರ್ಬಳಕೆ ತಡೆಯಬೇಕು. ಅಕ್ರಮ ಮದ್ಯ ಮಾರಾಟ ನಿಲ್ಲಿಸಿ. ಭೂ ರಹಿತ ದಲಿತರಿಗೆ ಭೂಮಿ ಮಂಜೂರು ಮಾಡಿ. ಪ್ರತಿ ತಾಲೂಕಿಗೆ ಇಂತಿಷ್ಟು ಜಮೀನು ಮೀಸಲಿಡಬೇಕು. ಶಿವಪುರ ಗ್ರಾಮದಲ್ಲಿ ದಲಿತರ ಸ್ಮಶಾನ ಸಮಸ್ಯೆ ಪರಿಹರಿಸಿ. ನರೇಗಾ ಕೂಲಿ ಕೆಲಸ 200 ದಿನಗಳಿಗೆ ಹೆಚ್ಚಿಸಿ. ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ದಲಿತರ ಸಮಸ್ಯೆಗಳನ್ನು ನಿವಾರಿಸಬೇಕು ಎಂದು ಆಗ್ರಹಿಸಿದರು.
ಪದಾಧಿಕಾರಿಗಳಾದ ದೇವಪ್ಪ ದೇವರಮನಿ, ಕಂಠೆಪ್ಪ ಹಣವಾಳ, ರಾಮಪ್ಪ ಗುಡ್ಲಾನೂರ, ಅಡಿವೆಪ್ಪ, ದೇವಮ್ಮ ಕನಕಗಿರಿ ಸೇರಿ ಇತರರಿದ್ದರು.