

ಕೊಪ್ಪಳ: ಜಿಲ್ಲಾದ್ಯಂತ ಮಳೆರಾಯನ ಅವಾಂತರ ಮುಂದುವರೆದಿದೆ. ಅಬ್ಬರ ಜೋರಾಗಿರದಿದ್ದರೂ ನಿರಂತರ ಮಳೆ ಕೃಷಿ ಚಟುವಟಿಕೆಗಳಿಗೆ ಸಂಕಷ್ಟ ತಂದಿಟ್ಟಿದೆ. ಇನ್ನೆರೆಡು ದಿನ ಮಳೆ ಮುಂದುವರೆವ ಸೂಚನೆಯಿಂದ ಮತ್ತಷ್ಟು ಹಾನಿ ಸಂಭವಿಸುವ ಸಾಧ್ಯತೆ ಇದೆ.
ಗುರುವಾರ ಒಂದೇ ದಿನ ಶೇ.391ರಷ್ಟು ಮಳೆ ಸುರಿದಿದೆ. ವಾಸ್ತವವಾಗಿ 3 ಮಿ.ಮೀ.ನಷ್ಟಾಗಬೇಕಿತ್ತು. ವಾಸ್ತವವಾಗಿ 17 ಮಿ.ಮೀ.ನಷ್ಟಾಗಿದೆ. ಮುಖ್ಯವಾಗಿ ಕೊಪ್ಪಳ, ಕಾಟಗಿ, ಗಂಗಾವತಿ, ಯಲಬುರ್ಗಾ ತಾಲೂಕುಗಳಲ್ಲಿ ಹೆಚ್ಚಾಗಿ ಮಳೆಯಾಗಿದೆ. ಇರಕಲ್ಗಡಾ, ಅಳವಂಡಿ, ಕುಕನೂರು, ಮಂಗಳೂರು, ಯಲಬುರ್ಗಾ, ಕಾರಟಗಿ ಹೋಬಳಿಗಳಲ್ಲಿ ಇತರ ಭಾಗಗಳಿಗಿಂತ ಅಧಿಕ ಮಳೆಯಾಗಿದೆ. ಅ.21ವರೆಗೆ ಮಳೆ ಮುಂದುವರೆಯುವ ಸಾಧ್ಯತೆ ಇದ್ದು ಇನ್ನಷ್ಟು ಹಾನಿ ಸಂಭವಿಸಲಿದ್ದು ರೈತಾಪಿವರ್ಗವನ್ನು ಆತಂಕಕ್ಕೆ ದೂಡಿದೆ.
ಕಳೆದೊಂದು ವಾರದಲ್ಲಿ 300 ಹೆಕ್ಟೇರ್ ಕೃಷಿ ಹಾಗೂ 50-100 ಹೆಕ್ಟೇರ್ನಷ್ಟು ತೋಟಗಾರಿಕೆ ಬೆಳೆಗಳು ಹಾನಿಯಾಗಿವೆ. ಮೆಕ್ಕೆಜೋಳ, ಹತ್ತಿ, ತೊಗರಿ, ಅಲಸಂದಿ, ದ್ರಾ, ಈರುಳ್ಳಿ ಸೇರಿ ಇತರ ಬೆಳೆಗಳು ವರ್ಷಧಾರೆಗೆ ನೆಲಕಚ್ಚಿವೆ. ಗಂಗಾವತಿ, ಕಾರಟಗಿ ಭಾಗದಲ್ಲಿ ಭತ್ತಕ್ಕೆ ಹಾನಿಯಾಗಿದೆ. ಗಾಳಿ&ಮಳೆಗೆ ಭತ್ತ ನೆಲಕ್ಕುರುಳಿದ್ದು, ಕೈಗೆ ಬಂದ ಬೆಳೆ ನಷ್ಟವಾಗಿದೆ. ಸತತ ಮೋಡ ಕವಿದ ವಾತವರಣ ಕಾರಣ ಭತ್ತಕ್ಕೆ ಕಂದು ಜಿಗಿ ಹುಳು ಭಾದೆ ಕಾಡಲಾರಂಭಿಸಿದೆ