

ಕೊಪ್ಪಳ: ಲೋಕಸಭೆ ಚುನಾವಣೆ ಅಂಗವಾಗಿ ಜಿಲ್ಲಾಡಳಿತದಿಂದ ಶನಿವಾರ ನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಪತ್ರಕರ್ತರು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳ ತಂಡಗಳ ನಡುವೆ ಕ್ರಿಕೆಟ್ ಪಂದ್ಯಾವಳಿ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.
ಪಂದ್ಯಾವಳಿಗೂ ಮುನ್ನ ಮತದಾನ ಪ್ರತಿಜ್ಞಾ ವಿಧಿ ಬೋಧಿಸಿದ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಿರಂತರವಾಗಿ ಸ್ವೀಪ್ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರಿಂದ ಹೆಚ್ಚಿನ ಮತದಾನ ಆಗಿದೆ. ಲೋಕಸಭೆ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಮನೆ ಭೇಟಿ, ವಾಕಥಾನ್, ಬೈಕ್ ರಾಲಿ, ಎತ್ತಿನ ಬಂಡಿ ಅಭಿಯಾನ, ಮ್ಯಾರಾಥಾನ್, ಪಂಜಿನ ಮೆರವಣಿಗೆ, ವಿಶೇಷ ಚೇತನರ ಬೈಕ್ ರ್ಯಾಲಿ, ಆರೋಗ್ಯ ಶಿಬಿರ, ಮಹಿಳೆಯರಿಂದ ಮಾನವ ಸರಪಳಿ, ಕ್ಯಾಂಡಲ್ ಲೈಟ್ ಅಭಿಯಾನ ಮೂಲಕ ಜಾಗೃತಿ ಮೂಡಿಸಲಾಗಿದೆ ಎಂದರು.
ಜಿಲ್ಲಾಡಳಿತ, ಜಿಪಂ ಹಾಗೂ ಕೊಪ್ಪಳ ಮೀಡಿಯಾ ಕ್ಲಬ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ತಂಡಗಳ ನಡುವೆ ಕ್ರಿಕೆಟ್ ನಡೆಯಿತು. ಎರಡು ಮಾಧ್ಯಮ ತಂಡಗಳ ವಿರುದ್ಧ ಜಿಲ್ಲಾಡಳಿತ ತಂಡ ವಿಜಯ ಸಾಧಿಸಿತು. ಡಿಸಿ ನಲಿನ್ ಅತುಲ್, ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಸಕ್ರಿಯವಾಗಿ ಭಾಗಿಯಾಗಿ ಗಮನ ಸೆಳೆದರು.
ಪ್ರಭುರಾಜ ಎಂಬುವರು ತಮ್ಮ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮತದಾನ ಜಾಗೃತಿ ಸಂದೇಶ ಹಾಕಿಸಿದ್ದು, ಸಿಇಒಗೆ ನೀಡಿ ಮದುವೆಗೆ ಆಹ್ವಾನಿಸಿದರು. ಚುನಾವಣಾ ವೀಕ್ಷಕ ಚಂದ್ರಶೇಖರ್ ತೆಮ್ಮಬಾವೇಕರ್, ಜಿಲ್ಲಾ ಚುನಾವಣಾ ರಾಯಭಾರಿಗಳಾದ ಡಾ. ಶಿವಕುಮಾರ್ ಮಾಲಿ ಪಾಟೀಲ್, ಮೈಬೂಬು ಕಿಲ್ಲೆದಾರ, ಜಿಪಂ ಮುಖ್ಯ ಲೆಕ್ಕಾಧಿಕಾರಿ ಅಮೀನ್ ಅತ್ತಾರ್, ತಾಪಂ ಇಒ ದುಂಡಪ್ಪ ತುರಾದಿ ಇತರರಿದ್ದರು.