ಕೊಪ್ಪಳ: ಅಪ್ರಾಪ್ತಳನ್ನು ಅಪಹರಿಸಿ ಅತ್ಯಾಚಾರ ಎಸಗಿದವನಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ 40 ಸಾವಿರ ರೂ. ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಲಯ (ಪೋಕ್ಸೋ) ಆದೇಶಿಸಿದೆ.
2019ರ ಮಾರ್ಚ್ 1 ರಂದು ಯಲಬುರ್ಗಾ ತಾಲೂಕಿನ ಗ್ರಾಮವೊಂದರ ನಿವಾಸಿ ನಜೀರಸಾಬ ಮೋಟೆಖಾನ್, ಅದೇ ಗ್ರಾಮದ ಬಾಲಕಿಯನ್ನು ಪುಸಲಾಯಿಸಿವ ಅಪಹರಿಸಿ ಕೊಪ್ಪಳಕ್ಕೆ ಕರೆತಂದಿದ್ದ. ಬಳಿಕ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ. ಐದು ದಿನಗಳ ಕಾಲ ಗೃಹ ಬಂಧನದಲ್ಲಿಟ್ಟಿದ್ದ. ಈ ಅವಧಿಯಲ್ಲೂ ರೇಪ್ ಮಾಡಿದ್ದ. ಈ ಸಂಬಂಧ ಯಲಬುರ್ಗಾ ಠಾಣೆ ಪಿಎಸ್ಐ ಬಸವರಾಜ ಪ್ರಕರಣ ದಾಖಲಿಸಿದ್ದರು. ಸಿಪಿಐ ರಮೇಶ ರೊಟ್ಟಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಜೀರಸಾಬ್ನನ್ನು ಅಪರಾಧಿ ಎಂದು ಘೋಷಿಸಿದೆ.
10 ವರ್ಷ ಜೈಲು ಶಿಕ್ಷೆ ಹಾಗೂ 40 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶ ಕುಮಾರ ಡಿ.ಕೆ. ಡಿ.31ರಂದು ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಗೌರಮ್ಮ ದೇಸಾಯಿ ಪ್ರಕರಣ ನಡೆಸಿ ವಾದ ಮಂಡಿಸಿದ್ದರು. ಮಹಿಳಾ ಪೋಲಿಸ್ ಕಾನಿಸ್ಟೇಬಲ್ ವಿಜಯಲಕ್ಷಿ$್ಮ ನ್ಯಾಯಾಲಯಕ್ಕೆ ಸಾಕ್ಷಿದಾರರನ್ನು ಹಾಜರುಪಡಿಸಿ ಸಹಕರಿಸಿದ್ದಾಗಿ ಸರ್ಕಾರಿ ಅಭಿಯೋಜಕರ ಕಚೇರಿ ಪ್ರಕಟಣೆ ತಿಳಿಸಿದೆ.